ದಯವಿಟ್ಟು ಕೊಹ್ಲಿಗೆ ಸ್ವಲ್ಪ ಹೇಳಿ... ಅನುಷ್ಕಾ ಶರ್ಮಾ ಬಳಿ ವಿಶೇಷ ಮನವಿ ಮಾಡಿದ ಅಭಿಮಾನಿಗಳು! Virat Kohli

Virat Kohli
Published on

Virat Kohli : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಆಘಾತದಿಂದ ಕ್ರೀಡಾಭಿಮಾನಿಗಳು ಚೇತರಿಸಿಕೊಳ್ಳುವ ಮುನ್ನವೇ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಕೂಡ ಸಾಂಪ್ರದಾಯಿಕ ಸ್ವರೂಪಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ವಿರಾಟ್ ತಮ್ಮ ನಿವೃತ್ತಿ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ನಿರ್ಣಾಯಕ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅಂತಹ ನಿರ್ಧಾರ ತೆಗೆದುಕೊಳ್ಳದಂತೆ ಬಿಸಿಸಿಐ, ವಿರಾಟ್​ ಅವರಲ್ಲಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ನಿವೃತ್ತಿ ನಿರ್ಧಾರವನ್ನು ಹಿಂಪಡೆದು ಇನ್ನೂ ಕೆಲವು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಲು ಕೊಹ್ಲಿಗೆ ಸಲಹೆ ನೀಡಲಾಗಿದೆ ಎಂಬ ಮಾತುಗಳು ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದೆ.

ಒಂದೆಡೆ, ಭಾರತದ ಮಾಜಿ ಕ್ರಿಕೆಟಿಗರು ಇನ್ನೊಂದೆಡೆ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಅಭಿಮಾನಿಯೊಬ್ಬರು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರಿಗೆ ವಿಶೇಷ ಮನವಿ ಮಾಡಿದ್ದಾರೆ.

'ಭಾಬಿ ಜಿ... ದಯವಿಟ್ಟು ವಿರಾಟ್ ಭಾಯ್‌ಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದದಂತೆ ಹೇಳಿ' ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಇತ್ತೀಚೆಗೆ ಮುಂಬೈನಲ್ಲಿ ವಿರಾಟ್ ಮತ್ತು ಅನುಷ್ಕಾ ಒಟ್ಟಿಗೆ ಹೋಗುತ್ತಿರುವ ವಿಡಿಯೋವನ್ನು ಸಹ ಲಗತ್ತಿಸಿದ್ದಾರೆ. ಅಭಿಮಾನಿಗಳು 'ಅನುಷ್ಕಾ ಜಿ.. ದಯವಿಟ್ಟು ನಿವೃತ್ತಿ ವಿಚಾರದಲ್ಲಿ ಕೊಹ್ಲಿಯನ್ನು ತಡೆಯಿರಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಐಪಿಎಲ್ 2025ರ ನಂತರ, ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. 5 ಟೆಸ್ಟ್ ಸರಣಿಗಳು ಜೂನ್ 20 ರಿಂದ ಆರಂಭವಾಗಲಿವೆ. ಈ ಸರಣಿಗೆ ಬಿಸಿಸಿಐ ಶೀಘ್ರದಲ್ಲೇ ತಂಡವನ್ನು ಪ್ರಕಟಿಸಲಿದೆ. ಅನುಭವಿ ವಿರಾಟ್ ಇಂಗ್ಲೆಂಡ್ ಸರಣಿಯಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಬಿಸಿಸಿಐ ಆಶಿಸುತ್ತದೆ. ಸದ್ಯ ಕೊಹ್ಲಿ, ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂದಹಾಗೆ, ವಿರಾಟ್​ ಕೊಹ್ಲಿ ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು 11 ಪಂದ್ಯಗಳಲ್ಲಿ 505 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳು ಸೇರಿವೆ. ಈ ಬಾರಿ ಆರ್​ಸಿಬಿ ಐಪಿಎಲ್ ಪ್ರಶಸ್ತಿ ಕನಸನ್ನು ನನಸಾಗಿಸುವ ಹೆಚ್ಚಿನ ಅವಕಾಶವನ್ನು ಹೊಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net