ಮತ್ತೊಂದು ದಾಖಲೆ ಬರೆದ ಚೇಸ್​ ಮಾಸ್ಟರ್​: ಸಂಗಕ್ಕಾರ ಹಿಂದಿಕ್ಕಿದ ಕೊಹ್ಲಿ, ಇನ್ನು ಸಚಿನ್​ ಮಾತ್ರ ಬಾಕಿ! Virat Kohli

Virat Kohli
Published on

ಸಿಡ್ನಿ: ಟೀಮ್​ ಇಂಡಿಯಾದ ಸ್ಟಾರ್ ಆಟಗಾರ, ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​ ಹಾಗೂ ರನ್​ ಮೆಷಿನ್​ ವಿರಾಟ್ ಕೊಹ್ಲಿ ( Virat Kohli ) ಅವರು ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಕಿಂಗ್​ ಕೊಹ್ಲಿ ಪಾತ್ರರಾಗಿದ್ದಾರೆ.

ಸಿಡ್ನಿಯಲ್ಲಿ ಇಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅಜೇಯ 74 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. 54 ರನ್​ ಗಳಿಸಿದಾಗಲೇ ಕೊಹ್ಲಿ ಅವರು ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ಹಿಂದಿಕ್ಕಿದರು.

ಅಂದಹಾಗೆ, ಸಂಗಕ್ಕಾರ ಅವರು 404 ಏಕದಿನ ಪಂದ್ಯಗಳಲ್ಲಿ 41.98 ಸರಾಸರಿಯಲ್ಲಿ 14,234 ರನ್ ಗಳಿಸಿದ್ದಾರೆ. ಕೊಹ್ಲಿ ಅವರು ಕೇವಲ 305 ಪಂದ್ಯಗಳಲ್ಲೇ ಸಂಗಕ್ಕಾರ ಅವರನ್ನು ಹಿಂದಿಕ್ಕಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಟೀಮ್​ ಇಂಡಿಯಾದ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಅವರು ಒಟ್ಟು 463 ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

* ಸಚಿನ್ ತೆಂಡೂಲ್ಕರ್ (ಭಾರತ) – 463 ಪಂದ್ಯಗಳಲ್ಲಿ 18,426 ರನ್‌ಗಳು

* ವಿರಾಟ್ ಕೊಹ್ಲಿ (ಭಾರತ) – 305 ಪಂದ್ಯಗಳಲ್ಲಿ 14,255 ರನ್‌ಗಳು

* ಕುಮಾರ್ ಸಂಗಕ್ಕಾರ (ಶ್ರೀಲಂಕಾ) – 404 ಪಂದ್ಯಗಳಲ್ಲಿ 14,234 ರನ್‌ಗಳು

* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 375 ಪಂದ್ಯಗಳಲ್ಲಿ 13,704 ರನ್‌ಗಳು

* ಸನತ್ ಜಯಸೂರ್ಯ (ಶ್ರೀಲಂಕಾ) – 404 ಪಂದ್ಯಗಳಲ್ಲಿ 13,430 ರನ್‌ಗಳು

ಇನ್ನು ಇಂದು ನಡೆದ ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಮ್ಯಾಟ್ ರೆನ್‌ಶಾ (56) ಅರ್ಧಶತಕ ಗಳಿಸಿದರೆ, ಮಿಚೆಲ್ ಮಾರ್ಷ್ (41) ಮತ್ತು ಮ್ಯಾಥ್ಯೂ ಶಾರ್ಟ್ (30) ಉತ್ತಮ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳ ಪರ ಹರ್ಷಿತ್ ರಾಣಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದರೆ, ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ನಂತರ ಗುರಿ ಬೆನ್ನತ್ತಿದ ಭಾರತ, ರೋಹಿತ್ ಶರ್ಮಾ (ಅಜೇಯ 121 ರನ್​, 125 ಎಸೆತ, 13 ಬೌಂಡರಿ, 3 ಸಿಕ್ಸರ್) ಶತಕ ಮತ್ತು ವಿರಾಟ್ ಕೊಹ್ಲಿ (ಅಜೇಯ 74 ರನ್​, 81 ಎಸೆತ, 7 ಬೌಂಡರಿ) ಅರ್ಧಶತಕ ಗಳಿಸುವುದರೊಂದಿಗೆ ಭಾರತ 38.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 237 ರನ್‌ಗಳ ಗುರಿಯನ್ನು ತಲುಪಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net