ಬೆಂಗಳೂರಲ್ಲಿ ಕೆಲಸ ಸಿಗದೇ ಇದ್ದಿದ್ದರೆ ಚೆನ್ನಾಗಿರ್ತಿತ್ತು... ಮಗಳ ಸಾವು, ಮುಗಿಲು ಮುಟ್ಟಿದ ತಂದೆಯ ಆಕ್ರಂದನ! Kurnool Bus Accident

Kurnool Bus Accident
Published on

ಕರ್ನೂಲ್​: ನಿನ್ನೆ (ಅ.24) ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಜವರಾಯ ತನ್ನ ಅಟ್ಟಹಾಸ ( Kurnool Bus Accident ) ಮೆರೆದು 19 ಮಂದಿಯನ್ನು ಬಲಿಪಡೆದುಕೊಂಡಿದ್ದು ಈಗಲೂ ದುಸ್ವಪ್ನವಾಗಿ ಕಾಡುತ್ತಿದೆ. ಖಾಸಗಿ ಬಸ್ ಒಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಡೀ ಬಸ್​ ಬೆಂಕಿಗೆ ಆಹುತಿಯಾಯಿತು. ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಎಸಿ ಕೋಚ್​​ ಬಸ್ಸಿನಲ್ಲಿ ಅಗ್ನಿ ಹೊತ್ತಿಕೊಂಡ ಕಾರಣ 19 ಪ್ರಯಾಣಿಕರು ಸುಟ್ಟು ಕರಕಲಾಗಿ, 22 ಮಂದಿ ಪವಾಡಸದೃಶ ರೀತಿಯಲ್ಲಿ ಪಾರಾದರು.

ಈ ದುರಂತದಲ್ಲಿ ಮಡಿದ ಒಬ್ಬೊಬ್ಬ ಪ್ರಯಾಣಿಕನ ಹಿಂದೆಯೂ ಒಂದೊಂದು ಕರಣಾಜನಕ ಕತೆ ಇದೆ. ಅದರಲ್ಲಿ 23 ವರ್ಷದ ಯುವತಿ ಅನುಷಾಳ ಕತೆಯೂ ಒಂದು. ಬೆಂಗಳೂರಿನಲ್ಲಿ ಅಕ್ಸೆಂಚರ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಕ್ಯಾಂಪಸ್​ ಪ್ಲೇಸ್​ಮೆಂಟ್​ ಪಡೆಯುವ ಮೂಲಕ ತನ್ನ ಹೆತ್ತವರಿಗೆ ಅನುಷಾ ಹೆಮ್ಮೆ ತಂದಿದ್ದಳು. ಇದೀಗ ಅನುಷಾಳ ಸಾವು ಹೆತ್ತರಿಗೆ ದುಸ್ವಪ್ನವಾಗಿ ನಿತ್ಯವೂ ಕಾಡುತ್ತಿದೆ.

ನನ್ನ ಮಗಳಿಗೆ ಬೆಂಗಳೂರಿನಲ್ಲಿ ಆ ಕೆಲಸ ಸಿಗದೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನುಷಾಳ ತಂದೆ ಕಣ್ಣೀರಿಟ್ಟಿದ್ದಾರೆ. ಮಗಳ ಸಾವಿನಿಂದ ಕಂಗೆಟ್ಟಿರುವ ಗಂಡ-ಹೆಂಡತಿ, ಮಗಳೊಂದಿಗಿನ ಕೊನೆಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಶೋಕಿಸುತ್ತಿದ್ದಾರೆ. ಎಂದಿನಂತೆ ನಾವು ನಮ್ಮ ಮಗಳನ್ನು ಬಸ್​ ನಿಲ್ದಾಣದಿಂದ ಆತ್ಮೀಯವಾಗಿ ಬೀಳ್ಕೊಟ್ಟೆವು. ಆದರೆ, ಅದೇ ಕೊನೆಯ ಬೀಳ್ಕೊಡಿಗೆಯಾಗುತ್ತೆ ಅಂತ ಭಾವಿಸಿರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳ ಎದುರು ಅನುಷಾಳ ತಂದೆ ದುಃಖಿಸಿದರು.

ದೀಪಾವಳಿಗೆ ಬಂದಿದ್ದ ನನ್ನ ಮಗಳನ್ನು ಇನ್ನಷ್ಟು ದಿನ ಇದ್ದು ಹೋಗುವಂತೆ ಕೇಳಿಕೊಂಡಿದ್ದೆ. ಆದರೆ, ಆಗಲಿಲ್ಲ. ಹಬ್ಬವನ್ನು ಮುಗಿಸಿ, ಬೆಂಗಳೂರಿಗೆ ಹಿಂತಿರುಗಿದ ನನ್ನ ಮಗಳು ಬೂದಿಯಾಗಿದ್ದಾಳೆ ಎಂದು ಅನುಷಾಳ ತಾಯಿ ರೋಧಿಸಿದರು. ಇಡೀ ಕುಟುಂಬಕ್ಕೆ ಭರವಸೆಯಾಗಿದ್ದ ಅನುಷಾ ಅನಿರೀಕ್ಷಿತ ಘಟನೆಯಿಂದಾಗಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾಳೆ. ಸುರಕ್ಷಿತ ಪ್ರಯಾಣ ಎಂದು ಬಸ್ಸನೇರಿದ್ದ ಅನುಷಾಳ ಬದುಕು ಇದೀಗ ಕಮರಿ ಹೋಗಿದೆ. ವಿಧಿಯಾಟಕ್ಕೆ ಅನುಷಾ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಪೆಟ್ರೋಲ್​ ಲೀಕ್​ ಆಗಿ ಬೆಂಕಿ

ಅಂದಹಾಗೆ, ಅಪಘಾತಕ್ಕೀಡಾದ ಬಸ್​ನಲ್ಲಿ ಒಟ್ಟು 41 ಜನರಿದ್ದರು. ಅವರಲ್ಲಿ ಇಬ್ಬರು ಚಾಲಕರಿದ್ದರು. ಬೈಕ್​ಗೆ ಡಿಕ್ಕಿ ಹೊಡೆದ ಬಸ್, ಒಂದಷ್ಟು ದೂರ ಬೈಕ ಅನ್ನು​ ಎಳೆದೊಯ್ದಿತು. ಈ ವೇಳೆ, ಬೈಕ್​ ಟ್ಯಾಂಕ್​ನಿಂದ ಪೆಟ್ರೋಲ್​ ಲೀಕ್​ ಆಗಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತ ಸಂಭವಿಸಿದ ಬಳಿಕ ಬಸ್​ ನಿಲ್ಲಿಸುವ ಬದಲು ಬೈಕ್​ ಎಳೆದೊಯ್ದಿದ್ದೇ ಈ ಅವಘಡಕ್ಕೆ ಕಾರಣವಾಗಿದೆ. ಅಸಲಿಗೆ, ಬಸ್​ನ ಡಿಸೇಲ್​ ಟ್ಯಾಂಕ್​ಗೆ ಅಗ್ನಿ ತಗುಲಿಲ್ಲ. ಆದರೆ, ಬಸ್​ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ತನಿಖೆಯನ್ನು ಚುರುಕುಗೊಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net