

Virat Kohli: ಐಪಿಎಲ್ 18ನೇ ಆವೃತ್ತಿಯು ಇದೀಗ ಕೊನೆಯ ಹಂತಕ್ಕೆ ತಲುಪಿದ್ದು, ಇಂದಿನ ಆರ್‌ಸಿಬಿ ಮತ್ತು ಲಖನೌ ಸೂಪರ್ ಜೈಂಟ್ಸ್ ಪಂದ್ಯದ ಬಳಿಕ ಪ್ಲೇಆಫ್ ಪಂದ್ಯಗಳು ಶರುವಾಗಲಿವೆ. ಲೀಗ್ ಹಂತದ ಕಡೆಯ ಪಂದ್ಯ ಇದಾಗಿದ್ದು, ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಲಖನೌ ಎದುರು ಗೆದ್ದು ಈ ಸೀಸನ್ನ ಪ್ಲೇಆಫ್ ಕ್ವಾಲಿಫೈರ್ 1ಕ್ಕೆ ಭರ್ಜರಿ ಎಂಟ್ರಿಕೊಡಲು ಸಜ್ಜಾಗಿರುವ ಆರ್‌ಸಿಬಿ, 18 ಪಾಯಿಂಟ್ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಉಳಿಯುವ ಗುರಿಯನ್ನು ಹೊಂದಿದೆ. ಇದು ನಿರೀಕ್ಷಿಸಿದಷ್ಟು ಸುಲಭವಿಲ್ಲ. ಕಾರಣ, ಎಲ್ಎಸ್ಜಿ ಕೂಡ ಲೀಗ್ನ ಕೊನೆಯ ಪಂದ್ಯವನ್ನು ಆಡಲಿದ್ದು, ಗೆಲುವಿನ ಮೂಲಕ 18ನೇ ಆವೃತ್ತಿಗೆ ಗುಡ್ಬೈ ಹೇಳುವ ಬಯಕೆಯಲ್ಲಿದೆ. ಹೀಗಿರುವಾಗ ಎರಡೂ ತಂಡಗಳಿಗೂ ಇದು ಗೆಲ್ಲಲೇ ಬೇಕಾದ ಪಂದ್ಯ ಎಂಬುದು ಗಮನಾರ್ಹ.
ಈ ಆವೃತ್ತಿಯ ಆರಂಭದ ಪಂದ್ಯದಿಂದಲೂ ತಂಡದ ಪರ ಉತ್ತಮ ಇನ್ನಿಂಗ್ಸ್ ನೀಡಿರುವ ವಿರಾಟ್ ಕೊಹ್ಲಿ, ಕಳೆದ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಐಪಿಎಲ್ ಆಟಗಾರನಾಗಿ ಹೊರಹೊಮ್ಮಿದರು. ಅಂತೆಯೇ ಈ ಬಾರಿಯೂ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಹೆಚ್ಚುವರಿ ರನ್ ಗಳಿಸಿರುವ ಕೊಹ್ಲಿ, 2025ರಲ್ಲಿಯೂ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವುದು ಖಚಿತ. ಈ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಹಲವಾರು ದಾಖಲೆಗಳನ್ನು ಮುರಿಯುವುದು ಮತ್ತೊಂದು ವಿಶೇಷ. ಅಸಲಿಗೆ ಇಂದಿನ ಪಂದ್ಯದಲ್ಲಿ 24 ರನ್ ಗಳಿಸಿದರೆ, ಆರ್‌ಸಿಬಿ ಪರ ಕೊಹ್ಲಿ 9,000 ರನ್‌ಗಳ ಮೈಲಿಗಲ್ಲನ್ನು ತಲುಪುತ್ತಾರೆ. ಇದು ಐತಿಹಾಸಿಕ ದಾಖಲೆಯಾಗಲಿದೆ.
2008ರಿಂದಲೂ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ವಿರಾಟ್, ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಆರ್‌ಸಿಬಿ ಪರ 270 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಕೇವಲ ಐಪಿಎಲ್ನಲ್ಲೇ ಇಲ್ಲಿಯವರೆಗೆ 8,976 ರನ್ ಗಳಿಸಿರುವ ಕೊಹ್ಲಿ, 9,000ಕ್ಕೆ 24 ರನ್‌ಗಳ ದೂರವಿದ್ದಾರೆ. ಇದರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳಲ್ಲಿ 424 ರನ್ ಗಳಿಸಿದರೆ, ಐಪಿಎಲ್‌ನಲ್ಲಿ 256 ಇನ್ನಿಂಗ್ಸ್‌ಗಳಲ್ಲಿ 8,552 ರನ್‌ಗಳನ್ನು ದಾಖಲಿಸಿದ್ದಾರೆ.
ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರಾಗಿ ಮುಂದುವರೆದಿದ್ದಾರೆ. ಇಬ್ಬರೂ ಐಪಿಎಲ್‌ನಲ್ಲಿ 62 ಬಾರಿ ಅರ್ಧಶತಕ ಗಳಿಸಿದ್ದಾರೆ. ಇಂದಿನ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಏನಾದರೂ ಅರ್ಧಶತಕ ಸಿಡಿಸಿದರೆ, ಅವರು ವಾರ್ನರ್ ದಾಖಲೆ ಮುರಿಯಲಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರನಾಗಿ ಡೇವಿಡ್ ದಾಖಲೆಯನ್ನು ಮುರಿದು ತಮ್ಮದೇ ದಾಖಲೆಯನ್ನು ಬರೆಯಲಿದ್ದಾರೆ. ಇವರಿಬ್ಬರ ನಂತರದಲ್ಲಿ ರೋಹಿತ್ ಶರ್ಮ ಹೆಸರಿದೆ. 46 ಅರ್ಧಶತಕಗಳೊಂದಿಗೆ ಈ ಪಟ್ಟಿಯಲ್ಲಿ ಹಿಟ್ಮ್ಯಾನ್ ಮೂರನೇ ಸ್ಥಾನದಲ್ಲಿದ್ದಾರೆ.
ಈ ಸೀಸನ್ನಲ್ಲಿ ಇಲ್ಲಿಯವರೆಗೆ ಆರ್‌ಸಿಬಿ ಒಟ್ಟು 13 ಲೀಗ್ ಪಂದ್ಯಗಳನ್ನು ಆಡಿದೆ. ಅದರಲ್ಲಿ 8 ಪಂದ್ಯಗಳನ್ನು ಗೆದ್ದು, ನಾಲ್ಕು ಪಂದ್ಯಗಳನ್ನು ಸೋತಿದೆ. ಮಳೆಯಿಂದಾಗಿ ಒಂದು ಪಂದ್ಯ ರದ್ದಾಯಿತು. ಪ್ರಸ್ತುತ ಆರ್‌ಸಿಬಿ 17 ಅಂಕಗಳನ್ನು ಪಡೆದಿದ್ದು, +0.255 ರನ್ರೇಟ್ ಹೊಂದಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಲಖನೌ ಎದುರು ಗೆದ್ದರೆ, ಆರ್‌ಸಿಬಿ ಅಗ್ರ 2ನೇ ಸ್ಥಾನಕ್ಕೆ ಜಿಗಿಯುತ್ತದೆ ಮತ್ತು ಕ್ವಾಲಿಫೈಯರ್-1ಗೆ ಪ್ರವೇಶ ಪಡೆಯುತ್ತದೆ. ಈ ಪಂದ್ಯದಲ್ಲಿ ಆರ್‌ಸಿಬಿ ಸೋತರೆ, ಗುಜರಾತ್ ಟೈಟನ್ಸ್ ಅಗ್ರ 2ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್-1 ಗೆ ಪ್ರವೇಶಿಸಲಿದೆ,(ಏಜೆನ್ಸೀಸ್).