ಅಪೂರ್ಣ ಕಾಮಗಾರಿ ಅಪಾಯಕ್ಕೆ ದಾರಿ: ಮಳೆಗಾಲಕ್ಕಿಲ್ಲ ಮುನ್ನೆಚ್ಚರಿಕೆ ಕ್ರಮ : ರಾಷ್ಟ್ರೀಯ ಹೆದ್ದಾರಿ ಕೆಲಸದಿಂದ ತೊಂದರೆ

New Project (3)
ಮೈಟ್ ಕಾಲೇಜು ಕ್ರಾಸ್ ಬಳಿಯಲ್ಲಿ ರಸ್ತೆ ಕುಸಿಯುವ ಹಂತದಲ್ಲಿರುವುದು.
Published on

ಯಶೋಧರ ವಿ.ಬಂಗೇರ ಮೂಡುಬಿದಿರೆ

ಕುಲಶೇಖರ-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಮೂಡುಬಿದಿರೆ ತಾಲೂಕಿನ ವಿವಿಧ ಭಾಗಗಳಲ್ಲಿ ಹಾದುಹೋಗಿದ್ದು, ಈ ವರ್ಷದ ಬೇಸಿಗೆ ಕಾಲದಲ್ಲಿ ಬಿರುಸಿನ ಕಾಮಗಾರಿ ನಡೆದಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಮಳೆಗಾಲಕ್ಕೆ ಪೂರಕವಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದರಿಂದ ವಾಹನ ಸವಾರರು, ಸ್ಥಳೀಯ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಎಡಪದವು ಸಮೀಪದ ಬೆಳ್ಳಚ್ಚಾರು ಸೇತುವೆಯಿಂದ ಬೆಳುವಾಯಿ ಸಮೀಪದ ಚಿಲಿಂಬಿಯವರೆಗೆ ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಮಿಜಾರು, ತೋಡಾರು, ಮೂಡುಬಿದಿರೆ ರಿಂಗ್‌ರೋಡ್, ಕೆಸರುಗದ್ದೆ, ಬೆಳುವಾಯಿ ಜಂಕ್ಷನ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಲವು ಕಡೆ ಕಾಮಗಾರಿ ಪೂರ್ಣಗೊಂಡರೂ, ಬಹುತೇಕ ಕಡೆ ಅಪೂರ್ಣ ಕಾಮಗಾರಿ ಮತ್ತು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯ ಸ್ಥಿತಿ ಶೋಚನೀಯವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಗಳು ಸಂಚಾರ ಯೋಗ್ಯವಲ್ಲದ ರೂಪವನ್ನು ಪಡೆಯುತ್ತಿವೆ.

ಹಳ್ಳವಾಗುತ್ತಿದೆ ರಸ್ತೆ: ಬೆಳ್ಳಚ್ಚಾರು ಸೇತುವೆಯ ಬಳಿ ಅಡ್ಡರಸ್ತೆಯಿಂದ ನೀರು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರಸ್ತೆಯಲ್ಲಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಕಾಮಗಾರಿಯ ಜಲ್ಲಿಕಲ್ಲು, ಮಣ್ಣು ರಸ್ತೆ ಪಕ್ಕದಲ್ಲಿರುವ ತೋಟವನ್ನು ಸೇರಿವೆ. ತೋಡಾರು ಜಂಕ್ಷನ್‌ನಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ರಸ್ತೆಯಲ್ಲಿ ನೀರು ನಿಂತು ಹಳ್ಳದಂತೆ ಭಾಸವಾಗುತ್ತಿದೆ. ಕಾಮಗಾರಿ ವೇಳೆಗೆ ಸರ್ವೀಸ್ ರಸ್ತೆ ಕಲ್ಪಿಸಲಾಗಿದ್ದರೂ, ತೋಡಾರಿನಲ್ಲಿ ಈ ರಸ್ತೆಯಿಂದ ಡಾಂಬರು ಕಿತ್ತು ಬಂದು ಅಲ್ಲಲ್ಲಿ ಹೊಂಡಗಳು ಕಾಣಸಿಗುತ್ತಿವೆ. ಅದರ ಮೇಲೆ ನೀರು ನಿಲ್ಲುತ್ತಿರುವುದರಿಂದ ದ್ವಿಚಕ್ರ ವಾಹನಗಳು ಹೊಂಡದಲ್ಲಿ ಸ್ಕಿಡ್ ಆಗುವ ಸಂಭವವಿದೆ. ಬೆಳುವಾಯಿ ಸಮೀಪದ ಕೆಸರುಗದ್ದೆಯಲ್ಲೂ ಇದೆ ಪರಿಸ್ಥಿತಿ ಇದ್ದು, ಭಾರಿ ಮಳೆಗೆ ರಸ್ತೆ ಹಳ್ಳವಾಗುತ್ತಿದ್ದು, ಕಾರು, ದ್ವಿಚಕ್ರ ವಾಹನ ಸವಾರರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಅಲಂಗಾರು ಬಳಿಯ ಪೊಯ್ಯದಪಲ್ಕೆ ಪರಿಸರ ಕೆಸರುಮಯವಾಗಿದೆ.

ಕುಸಿತದ ಭೀತಿ

ಕೆಲವೆಡೆ ಹೊಸ ರಸ್ತೆಯ ಅಂಚುಗಳು ಬಿರುಕು ಬಿಟ್ಟಿದ್ದು, ಅವುಗಳ ಕಾಮಗಾರಿಗೆ ಬಳಸಲಾಗಿರುವ ಜಲ್ಲಿಕಲ್ಲು ರಸ್ತೆಯಲ್ಲಿ ಹರಡಿಕೊಂಡಿವೆ. ಇನ್ನು ಕೆಲವು ಕಡೆ ರಸ್ತೆ ಬದಿಯಲ್ಲಿ ಹಾಕಿರುವ ಜಲ್ಲಿಕಲ್ಲು, ಮಣ್ಣು ಮಳೆ ನೀರಿಗೆ ರಸ್ತೆ ಪಾಲಾಗುತ್ತಿದೆ. ತೋಡಾರು ಮೈಟ್ ಕಾಲೇಜು ಬಳಿಯಿಂದ ಕೊಡಮಣಿತ್ತಾಯ ದೈವಸ್ಥಾನ ಕ್ರಾಸ್‌ವರೆಗೆ ಏರುತಗ್ಗು ಮಾದರಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಮೈಟ್ ಕಾಲೇಜು ಕ್ರಾಸ್ ಬಳಿಯಲ್ಲಿ ರಸ್ತೆ ಕುಸಿವ ಹಂತದಲ್ಲಿದೆ. ಒಂದು ವೇಳೆ ರಸ್ತೆ ಕುಸಿದರೆ ಪಕ್ಕದಲ್ಲಿರುವ ಮನೆಗಳು ಮೇಲೆ ಬೀಳುವ ಸಂಭವವಿದೆ. ಕಳೆದ ಬಾರಿ ಗುಡ್ಡ ಕುಸಿತಕ್ಕೆ ಒಳಗಾಗಿದ್ದ ಬನ್ನಡ್ಕ ಪೆಟ್ರೋಲ್ ಪಂಪ್ ಬಳಿಯ ಗುಡ್ಡವನ್ನು ಅಗೆಯಲಾಗುತ್ತಿದ್ದು, ಕಾಮಗಾರಿ ವೇಳೆ ಒಂದು ಟ್ರಾನ್ಸ್‌ಫರ್ಮರ್, ವಿದ್ಯುತ್ ಕಂಬಗಳಿರುವ ಭಾಗವನ್ನು ಸೂಕ್ತ ಸಮಯದಲ್ಲಿ ತೆರವು ಮಾಡದೆ ಇರುವುದರಿಂದ ಭಾರಿ ಮಳೆಗೆ ಕುಸಿಯುವ ಸಂಭವವಿದೆ.

ಗ್ರಾಮಸಭೆಯ ಪ್ರಸ್ತಾಪಕ್ಕೂ ಕಿಮ್ಮತ್ತಿಲ್ಲ

ಬೆಳುವಾಯಿ ಹಾಗೂ ತೆಂಕಮಿಜಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಆಗುತ್ತಿರುವ ತೊಂದರೆಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸಭೆಯಲ್ಲೂ ನಿರ್ಣಯವಾಗಿದ್ದು, ರಾಷ್ಟ್ರೀಯ ಹೆದ್ದಾರಿಯವರ ಮೌನ, ಗುತ್ತಿಗೆದಾರರ ಇಚ್ಛಾಶಕ್ತಿಯ ಕೊರತೆಯಿಂದ ಮಳೆಗಾಲದ ಪ್ರಾರಂಭದಲ್ಲೇ ಜನರು ತೊಂದರೆ ಅನುಭವಿಸುವಂತಾಗಿದೆ.

ಮೈಟ್ ಕಾಲೇಜು ಕ್ರಾಸ್ ಬಳಿಯಲ್ಲಿ ರಸ್ತೆ ಕುಸಿಯುವ ಹಂತದಲ್ಲಿರುವುದು.
ಮೈಟ್ ಕಾಲೇಜು ಕ್ರಾಸ್ ಬಳಿಯಲ್ಲಿ ರಸ್ತೆ ಕುಸಿಯುವ ಹಂತದಲ್ಲಿರುವುದು.

ಹೆದ್ದಾರಿ ಕಾಮಗಾರಿಗಳಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದರೂ, ಅವರು ತಾತ್ಕಾಲಿಕ ಪರಿಹಾರ ಕಲ್ಪಿಸುತ್ತಾರೆ. ಮಳೆಗಾಲ ಬಳಿಕ ಆಗುವ ತೊಂದರೆಗಳ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಕಾಮಗಾರಿ ಮುಗಿಯುವ ವೇಳೆಗೆ ಅನಾಹುತಗಳು ಸಂಭವಿಸುತ್ತಿರುತ್ತವೆ. ಶರತ್ ದೇವಾಡಿಗ ಕಾಂತಾವರ, ವಾಹನ ಸವಾರ https://www.vijayavani.net/heavy-rains-cause-flooding-on-the-mangalore-citys-adhwana-pumpwell-highway-low-lying-areas-are-inundated https://www.vijayavani.net/district-collector-instructs-officials-to-prepare-ndrf-sdrf-team-for-d-kannada-district-to-face-natural-disasters

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net