ನಾ ಕೊಟ್ಟ ಬ್ಯಾಟ್​ ಮುರಿದುಬಿಟ್ಟಾ? ರಿಂಕು ಸಿಂಗ್​ ವಿರುದ್ಧ ಕೊಹ್ಲಿ ಗರಂ, ಆಣೆ ಮಾಡ್ತೀನಿ ಅಂದ್ರು ಒಪ್ಪದ ವಿರಾಟ್​

Virat Kohli
Published on

ಕೋಲ್ಕತ್ತ: ಇಂದು ಕೋಲ್ಕತ್ತ ನೈಟ್​ ರೈಡರ್ಸ್ (ಕೆಕೆಆರ್​)​ ವಿರುದ್ಧ ನಡೆಯಲಿರುವ ಐಪಿಎಲ್​ ಪಂದ್ಯಕ್ಕೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಸೂಪರ್​ ಸ್ಟಾರ್​ ವಿರಾಟ್​ ಕೊಹ್ಲಿಗೆ ಕೆಕೆಆರ್​ ಯುವ ಆಟಗಾರ ರಿಂಕು ಸಿಂಗ್​ ಕಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಪಂದ್ಯದ ಆರಂಭಕ್ಕೂ ಮುನ್ನ ಕೊಹ್ಲಿಯನ್ನು ಭೇಟಿಯಾದ ರಿಂಕು ಸಿಂಗ್​, ಉಡುಗೊರೆಯಾಗಿ ನೀವು ನೀಡಿದ್ದ ಬ್ಯಾಟ್​ ಮುರಿದು ಹೋಗಿದೆ ಎಂದು ಕೊಹ್ಲಿಗೆ ತಿಳಿಸಿದರು. ಅಲ್ಲದೆ, ಬ್ಯಾಟ್​ ಹೇಗೆ ಮುರಿದು ಹೋಯಿತು ಎಂದು ವಿವರಣೆ ಸಹ ನೀಡಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಕೊಹ್ಲಿ ನಾನು ಮತ್ತೊಂದು ಬ್ಯಾಟ್​ ಅನ್ನು ಉಡುಗೊರೆ ನೀಡುವ ಮೂಡ್​ನಲ್ಲಿ ಇಲ್ಲ ಎಂದರು.

Virat Kohli

ಈ ಸೀಸನ್​ನಲ್ಲಿ ಕೆಕೆಆರ್​ ಮತ್ತು ಆರ್​ಸಿಬಿ ಎರಡನೇ ಬಾರಿ ಮುಖಾಮುಖಿಯಾಗುತ್ತಿದೆ. ಮೊದಲ ಬಾರಿ ಮುಖಾಮುಖಿಯಾದಾಗ ಕೊಹ್ಲಿ 59 ಎಸೆತಗಳಲ್ಲಿ 83 ರನ್​ ಗಳಿಸಿದರೂ ಕೂಡ ಕೆಕೆಆರ್​ ತನ್ನ ಆಲ್​ರೌಂಡರ್​ ಪ್ರದರ್ಶನದಿಂದ ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿತು. ಈ ಪಂದ್ಯದ ಬಳಿಕ ಕೊಹ್ಲಿ, ರಿಂಕು ಸಿಂಗ್​ಗೆ ಬ್ಯಾಟ್​ ಅನ್ನು ಉಡುಗೊರೆ ನೀಡಿದ್ದರು. ಈ ಸಂಗತಿಯನ್ನು ರಿಂಕು ತಮ್ಮ ಇನ್​ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದರು. ಆದರೆ, ದುರಾದೃಷ್ಟವಶಾತ್​ ಆ ಬ್ಯಾಟ್​ ಇದೀಗ ಮುರಿದು ಹೋಗಿದೆ.

ಮುರಿದು ಬ್ಯಾಟ್​ ಕುರಿತು ರಿಂಕು ಮತ್ತು ಕೊಹ್ಲಿ ನಡುವಿನ ಸಂಭಾಷಣೆಯ ವಿಡಿಯೋವನ್ನು ಕೋಲ್ಕತ್ತ ನೈಟ್​ ರೈಡರ್ಸ್​ ತಂಡ ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಶೇರ್​ ಮಾಡಿಕೊಂಡಿದೆ. ಇಬ್ಬರ ನಡುವಿನ ಸಂಭಾಷಣೆ ಹೇಗೆ ನಡೆಯಿತು ಎಂಬುದು ಈ ಕೆಳಕಂಡಂತಿದೆ.

* ರಿಂಕು ಸಿಂಗ್​: ನೀವು ಕೊಟ್ಟ ಬ್ಯಾಟ್​ ಅನ್ನು ಸ್ಪಿನ್​ ಬೌಲಿಂಗ್​ ವೇಳೆ ನಾನು ಮುರಿದು ಹಾಕಿದೆ.

* ವಿರಾಟ್​ ಕೊಹ್ಲಿ: ನನ್ನ ಬ್ಯಾಟ್​?

* ರಿಂಕು ಸಿಂಗ್​: ಹೌದು

* ವಿರಾಟ್​ ಕೊಹ್ಲಿ: ಸ್ಪಿನ್​ ಬೌಲಿಂಗ್​ ವೇಳೆ ಮುರಿದು ಹಾಕಿದ್ರಾ? ನೀವು ಅದನ್ನು ಎಲ್ಲಿಂದ ಮುರಿದಿದ್ದೀರಿ?

* ರಿಂಕು ಸಿಂಗ್​: ಮಧ್ಯದ ಭಾಗದಿಂದ

* ವಿರಾಟ್​ ಕೊಹ್ಲಿ: ಹಾಗಾದರೆ ನಾನು ಏನು ಮಾಡಬೇಕು?

* ರಿಂಕು ಸಿಂಗ್​: ನಾನು ನಿಮಗೆ ತಿಳಿಸುತ್ತಿದ್ದೇನೆ.

* ವಿರಾಟ್​ ಕೊಹ್ಲಿ: ತೊಂದರೆ ಏನಿಲ್ಲ. ನನಗೆ ನೀನು ಹೇಳಿದ್ದು ಒಳ್ಳೆಯದೆ. ಆದರೆ, ನನಗೆ ಮಾಹಿತಿ ಬೇಕಿರಲಿಲ್ಲ.

(ಈ ವೇಳೆ ರಿಂಕು ಸಿಂಗ್​ ವಿರಾಟ್​ ಕೊಹ್ಲಿ ಅವರ ಎರಡು ಬ್ಯಾಟ್​ನಿಂದ ಚೆಂಡನ್ನು ಬಾರಿಸುತ್ತಾರೆ)

* ವಿರಾಟ್​ ಕೊಹ್ಲಿ: ಈ ಬ್ಯಾಟ್​ ಉತ್ತಮವಾಗಿಲ್ಲ.

* ರಿಂಕು ಸಿಂಗ್​: ಎರಡರಲ್ಲಿ ಒಂದನ್ನು ನೀವು ಕಳುಹಿಸುತ್ತಿದ್ದೀರಾ?

* ವಿರಾಟ್​ ಕೊಹ್ಲಿ: ನಾನು ಯಾರಿಗೆ ಕಳುಹಿಸುತ್ತಿದ್ದೇನೆ?

* ರಿಂಕು ಸಿಂಗ್​: ನೀವೇ ಇಟ್ಟುಕೊಳ್ಳಬಹುದು. (ಎರಡೂ ಬ್ಯಾಟ್​ಗಳನ್ನು ಕೊಹ್ಲಿಗೆ ಮರಳಿಸುತ್ತಾರೆ.

* ವಿರಾಟ್​ ಕೊಹ್ಲಿ: ನೀವು ಈ ಹಿಂದೆ ನನ್ನಿಂದ ಬ್ಯಾಟ್ ತೆಗೆದುಕೊಂಡಿದ್ದೀರಿ. ಈಗ ನಿಮಗೆ ಎರಡನೇ ಪಂದ್ಯದಲ್ಲಿ ಎರಡನೇ ಬ್ಯಾಟ್ ಬೇಕೇ? ನಿಮ್ಮ ಕಾರಣದಿಂದಾಗಿ, ನಾನು ನಂತರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ರಿಂಕು ಸಿಂಗ್​: ನಿಮ್ಮ ಮೇಲೆ ಆಣೆ ಮಾಡುತ್ತೇನೆ, ನಾನು ಮತ್ತೆ ಬ್ಯಾಟ್​ ಮುರಿಯುವುದಿಲ್ಲ. ಮುರಿದ ಬ್ಯಾಟ್​ ಅನ್ನು ನಾನು ನಿಮಗೆ ತೋರಿಸುತ್ತೇನೆ.

ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರು ರಿಂಕು ಸಿಂಗ್​ಗೆ ಬ್ಯಾಟ್ ನೀಡಲು ನಿರಾಕರಿಸಿದರೂ, ಇಂದಿನ ಪಂದ್ಯದ ನಂತರ ಆರ್​ಸಿಬಿ ಸ್ಟಾರ್ ಆಟಗಾರ ಕೊಹ್ಲಿ, ಕೆಕೆಆರ್​ ಯುವ ಆಟಗಾರನಿಗೆ ತನ್ನ ಇನ್ನೊಂದು ಬ್ಯಾಟ್ ನೀಡಲು ನಿರ್ಧರಿಸಿದರೂ ಆಶ್ಚರ್ಯವೇನಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net