Virat Kohli: ಕ್ರಿಕೆಟ್ ದಂತಕಥೆ, ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್, ‘ದಾಖಲೆಗಳ ಸರದಾರ’, ‘ರನ್ಮಷಿನ್’, ‘ಕಿಂಗ್’ ಎಂದೆಲ್ಲ ಕ್ರಿಕೆಟ್ ವಲಯದಿಂದ ಕರೆಯಲ್ಪಡುವ ಏಕೈಕ ಆಟಗಾರ ಯಾರಾದರೂ ಇದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ. ತಮ್ಮ ಬ್ಯಾಟ್ನಿಂದ ಕೇವಲ ರನ್ಗಳ ಹೊಳೆ ಹರಿಸುವುದು ಮಾತ್ರವಲ್ಲದೇ ಆಟದ ವೈಖರಿಯನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ಯುವುದು ಕೊಹ್ಲಿ ವಿಶೇಷತೆ. ಹುರುಪಿನಿಂದ, ಚೀರಾಟದಿಂದ ಎದುರಾಳಿಯನ್ನು ಆಟದಲ್ಲಿ ಕೆಣಕುವ ವಿರಾಟ್, ಪ್ರತಿಕ್ರಿಯೆಗಳಿಗೆ ತಕ್ಕಂತ ಅದ್ಭುತ ಹಾಗೂ ರಣರೋಚಕ ಪ್ರದರ್ಶನವನ್ನೇ ನೀಡುತ್ತಾರೆ. ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಕೊಹ್ಲಿಗೆ ಇದೀಗ ವಿಶೇಷ ಗೌರವ ಸಲ್ಲಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಇದು ಭಾರತ ಬಯಸಿದ ಸಂಘರ್ಷವಲ್ಲ…ಪ್ರತಿಯೊಂದು ದೇಶಕ್ಕೂ ತನ್ನ ನಾಗರಿಕರನ್ನು ರಕ್ಷಿಸುವ ಹಕ್ಕಿದೆ! India
ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಮೈದಾನದಲ್ಲಿ ಹುಚ್ಚೆದ್ದು ಸಂಭ್ರಮಿಸುವ ಅಭಿಮಾನಿಗಳು, ಕ್ರಿಕೆಟ್ ಹೊರತಾಗಿಯೂ ವಿರಾಟ್ ಮೇಲಿನ ಪ್ರೀತಿ. ಅಭಿಮಾನ, ಉತ್ಸಾಹ ತೋರುವಲ್ಲಿ ಎಂದಿಗೂ ಹಿಂದಿ ಬಿದ್ದಿಲ್ಲ. ಇತ್ತೀಚಿಗೆ ವಿರಾಟ್ ಟೆಸ್ಟ್ ನಿವೃತ್ತಿ ಘೋಷಿಸಿದ್ದಕ್ಕೆ ತೀರ ಬೇಸರ ಹೊರಹಾಕಿದ್ದ ಅಭಿಮಾನಿಗಳು, ಅವರ ಕೊಡುಗೆ, ಆಟದ ವೈಖರಿ, ಅಮೋಘ ಪ್ರದರ್ಶನಕ್ಕಾಗಿ ಮೆಚ್ಚುಗೆ, ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದರು. ಇದೀಗ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಮರು ಆರಂಭದ ಮೊದಲ ಪಂದ್ಯಕ್ಕೆ ಫ್ಯಾನ್ಸ್ ತಯಾರಾಗಿದ್ದಾರೆ.
ಮೇ.17ರಂದು ನಡೆಯಲಿರುವ ಕೆಕೆಆರ್ ವಿರುದ್ಧದ ಆರ್‌ಸಿಬಿ ಪಂದ್ಯದಲ್ಲಿ ಸ್ಟೇಡಿಯಂಗೆ ಹಾಜರಾಗುವ ಎರಡು ತಂಡದ ಅಭಿಮಾನಿಗಳು, ವಿರಾಟ್ ಕೊಹ್ಲಿ ಅವರ ಟೆಸ್ಟ್ ಜೆರ್ಸಿ ನಂ.18 ಅನ್ನು ಧರಿಸಿ ಬರುವಂತೆ ಕೊಹ್ಲಿ ಅಭಿಮಾನಿಗಳ ಬಳಗ ಕರೆ ನೀಡಿದೆ. ಪ್ರತಿಯೊಬ್ಬರು ಕೊಹ್ಲಿ ಅವರ ಸಂಖ್ಯೆಯಿರುವ ಟೆಸ್ಟ್ ಜೆರ್ಸಿ ಧರಿಸುವ ಮೂಲಕ ತಮ್ಮ ನೆಚ್ಚಿನ ಕ್ರಿಕೆಟ್ ದಂತಕಥೆಗೆ ವಿಶೇಷ ಗೌರವಿಸಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೊಹ್ಲಿ ಫ್ಯಾನ್ಸ್ ಕ್ರಿಕೆಟ್ ಪ್ರಿಯರಿಗೆ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ. ಒಟ್ಟಾರೆ ಮೇ.17 ಬೆಂಗಳೂರು ಕ್ರೀಡಾಂಗಣ ನಂ.18 ಜೆರ್ಸಿ ಮೂಲಕವೇ ಕಂಗೊಳಿಸಲಿದೆ ಎಂಬ ಮಾತುಗಳು ಸದ್ಯ ಹೆಚ್ಚಾಗಿವೆ,(ಏಜೆನ್ಸೀಸ್).