ಇತಿಹಾಸ ಬರೆದ ವಿರಾಟ್​ ಕೊಹ್ಲಿ... ಯಾವೊಬ್ಬ ಭಾರತೀಯ ಕ್ರಿಕೆಟಿಗನೂ ಸಾಧಿಸದ ಸಾಧನೆ ಇದು​! Virat Kohli

Virat Kohli
Published on

Virat Kohli : ವಿಶ್ವ ಕ್ರಿಕೆಟ್​ ಜಗತ್ತಿನ ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​, ರನ್​ ಮೆಷಿನ್​ ಎಂದೇ ಖ್ಯಾತಿಯಾಗಿರುವ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 13,000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸೃಷ್ಟಿಸಿದರು.

ಒಟ್ಟು 386 ಇನ್ನಿಂಗ್ಸ್‌ಗಳಲ್ಲಿ 13 ಸಾವಿರ ರನ್ ಗಡಿ ದಾಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್ ಸೀಸನ್​ ಭಾಗವಾಗಿ, ಸೋಮವಾರ (ಏಪ್ರಿಲ್​ 07) ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಿತು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 67 ರನ್ ಗಳಿಸಿದರು. ಈ ಮೂಲಕ ಟಿ20 ಇತಿಹಾಸದಲ್ಲಿ 13 ಸಾವಿರ ರನ್​ ಗಡಿ ದಾಟಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

ಇದಕ್ಕೂ ಮೊದಲು ಟಿ20 ಪಂದ್ಯಗಳಲ್ಲಿ 13,000 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ಗಳೆಂದರೆ ಕ್ರಿಸ್ ಗೇಲ್ (381 ಇನ್ನಿಂಗ್ಸ್‌ಗಳಲ್ಲಿ 14,562 ರನ್‌ಗಳು), ಅಲೆಕ್ಸ್ ಹೇಲ್ಸ್ (474 ​​ಇನ್ನಿಂಗ್ಸ್‌ಗಳಲ್ಲಿ 13,610 ರನ್‌ಗಳು), ಶೋಯೆಬ್ ಮಲಿಕ್ (487 ಇನ್ನಿಂಗ್ಸ್‌ಗಳಲ್ಲಿ 13,557 ರನ್‌ಗಳು) ಮತ್ತು ಪೊಲಾರ್ಡ್ (594 ಇನ್ನಿಂಗ್ಸ್‌ಗಳಲ್ಲಿ 13,537 ರನ್‌ಗಳು).

ಕೊಹ್ಲಿ ಫಾರ್ಮ್​ ಇದೇ ರೀತಿ ಮುಂದುವರಿದರೆ ಎಲ್ಲರ ದಾಖಲೆಗಳನ್ನು ಮುರಿದು ಟಿ20ಯಲ್ಲಿ ಕಿಂಗ್​ ಆಗುವುದರಲ್ಲಿ ಸಂದೇಹವೇ ಇಲ್ಲ. ಸದ್ಯ ಕೊಹ್ಲಿ ಫಿಟ್​ ಆಗಿದ್ದಾರೆ. ಹೀಗಾಗಿ ಇನ್ನಷ್ಟು ವರ್ಷಗಳ ಕಾಲ ಐಪಿಎಲ್​ ಆಡಲಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಕೊಹ್ಲಿ ನಿವೃತ್ತಿ ಹೇಳಿರುವುದರಿಂದ ಐಪಿಎಲ್ ಫಾರ್ಮಾಟ್ಯ್​ನಲ್ಲಿ ಮಾತ್ರ ಈ ದಾಖಲೆ ಮುರಿಯಲು ಅವಕಾಶವಿದೆ. ಮುರಿಯುತ್ತಾರೆ ಅನ್ನೋ ನಂಬಿಕೆ ಕೂಡ ಅಭಿಮಾನಿಗಳಲ್ಲಿ ಇದೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ (ಏ.07) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್​ ಗೆದ್ದ ಎಂಐ, ಮೊದಲು ಬೌಲಿಂಗ್ ಆಯ್ದುಕೊಂಡು ಆರ್​ಸಿಬಿಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು.​ ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಗೆ ಆರಂಭಿಕ ಬ್ಯಾಟರ್​ ಫಿಲ್​ ಸಾಲ್ಟ್ (4) ವಿಕೆಟ್ ಒಪ್ಪಿಸಿ ಆಘಾತ ನೀಡಿದರು. ಆದರೆ, ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ (67), ದೇವದತ್​ ಪಡಿಕ್ಕಲ್​ (37), ರಜತ್​ ಪಾಟಿದಾರ್ (64) ಹಾಗೂ ಜಿತೇಶ್​ ಶರ್ಮ (40)​ ಸ್ಫೋಟಕ ಬ್ಯಾಟಿಂಗ್​ ದಾಳಿ ನಡೆಸಿ, ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್​ಗೆ ಉತ್ತಮ ಆರಂಭ ಸಿಗದೆ, ಕಡೆಗೂ ಸೋಲಿನ ಸುಳಿಯಲ್ಲಿ ಸಿಲುಕಿತು.

ಮುಂಬೈ ಪರ ಆರಂಭಿಕರಾದ ರೋಹಿತ್ ಶರ್ಮ ಎಂದಿನಂತೆ ಕಳಪೆ ಪ್ರದರ್ಶನ ಇಲ್ಲಿಯೂ ಮುಂದುವರಿಸಿದರು. ಆರಂಭದಲ್ಲೇ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅವರ ಬೆನ್ನಲ್ಲೇ ಒಬ್ಬರಂತೆ ಮತ್ತೊಬ್ಬರು ಬ್ಯಾಟರ್​ಗಳು ವಿಕೆಟ್​ ಒಪ್ಪಿಸಿ, ಪೆವಿಲಿಯನ್​ನತ್ತ ಸಾಗಿದರು. ಈ ಮಧ್ಯೆ ಕಣಕ್ಕಿಳಿದ ಹಾರ್ದಿಕ್​ ಪಾಂಡ್ಯ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಲ್ಲದೇ ಕ್ಯಾಪ್ಟನ್​ ಪ್ರದರ್ಶನ ತೋರಿದರು. ಹಾರ್ದಿಕ್​ ಮತ್ತು ತಿಲಕ್ ವರ್ಮ ನೀಡಿದ ಉತ್ತಮ ಇನ್ನಿಂಗ್ಸ್​ ಕಡೆಗೂ ಫಲಿಸಲಿಲ್ಲ. ಇವರಿಬ್ಬರ ಹೋರಾಟವು ಫಲಿಸಲಿಲ್ಲ ಎಂಬುದೇ ಎಂಐ ಫ್ರಾಂಚೈಸಿ ಅಭಿಮಾನಿಗಳ ಬೇಸರ. ಇನ್ನು ಈ ಪಂದ್ಯದಲ್ಲಿಯೂ ಗೆದ್ದು ಬೀಗಿದ ಆರ್​ಸಿಬಿ, ಐಪಿಎಲ್​ನಲ್ಲಿ ತನ್ನ ಮೂರನೇ ಗೆಲುವನ್ನು ದಾಖಲಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net