

Kamal haasan : ಪ್ರಸ್ತುತ ಸಿನಿಮಾ ರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳ ಕ್ರೇಜ್ ತುಂಬಾನೇ ಇದೆ. ನೂರಾರು ಕೋಟಿ ಬಜೆಟ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸಲಾಗುತ್ತಿದ್ದು, ಜನರು ಕೂಡ ಬಿಗ್ ಬಜೆಟ್ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಏಕೆಂದರೆ, ಅದ್ಧೂರಿ ನಿರ್ಮಾಣ, ಸ್ಟಾರ್ಗಳ ದಂಡು ಹಾಗೂ ಕಲರ್ಫುಲ್ ಲೊಕೇಶನ್ ಸೇರಿದಂತೆ ಸಾಕಷ್ಟು ವೈವಿಧ್ಯತೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ಇರುತ್ತವೆ. ಕೆಲವೊಮ್ಮೆ ಕತೆ ಚೆನ್ನಾಗಿ ಇಲ್ಲದಿದ್ದರೂ ಬಿಗ್ಬಜೆಟ್ ಎಂಬ ಕಾರಣಕ್ಕೆ ಸಿನಿಮಾ ನೋಡುವ ಅನೇಕ ಮಂದಿ ಇದಾರೆ.
ಇನ್ನು ಉತ್ತಮ ಕತೆಗಳುಳ್ಳ ಸಣ್ಣ ಸಿನಿಮಾಗಳು ಕೂಡ ಯಶಸ್ಸು ಗಳಿಸುತ್ತಿವೆ. ಆದರೆ, ಈ ಸಿನಿಮಾಗಳು ಪ್ರಪಂಚದಾದ್ಯಂತ ಪ್ರೇಕ್ಷಕರನ್ನು ತಲುಪಲು ಸಾಧ್ಯವಿಲ್ಲ. ಒಂದು ವೇಳೆ ತಲುಪಿಸಬೇಕಾದರೆ, ಮತ್ತೆ ಬಿಗ್ಬಜೆಟ್ ಬೇಕಾಗುತ್ತದೆ. ಇನ್ನು ಬಜೆಟ್ ಎಂಬುದು ಕಥೆ ಮತ್ತು ಕಥಾವಸ್ತುವನ್ನು ಅವಲಂಬಿಸಿರುತ್ತದೆ ಎಂದು ಹೇಳುವ ಬದಲು, ಇಂದು ಕಥೆಯು ಬಜೆಟ್ ಅನ್ನು ಅವಲಂಬಿಸಿರುತ್ತದೆ ಎಂದು ಹೇಳುವಂತಿದೆ. ಹೀಗಾಗಿ ಇಂದು ದೊಡ್ಡ ಸಿನಿಮಾಗಳ ಬಗ್ಗೆ ಮಾತ್ರ ಚರ್ಚಿಸಲಾಗುತ್ತಿದೆ. ಸ್ಟಾರ್ಗಳ ಸಿನಿಮಾದ ಬಜೆಟ್ ಕೇಳಿದರೆ, ಬೆರಗಾಗುವುದು ಖಚಿತ.
ಆದರೆ, ಈ ಬಿಗ್ ಬಜೆಟ್ ಟ್ರೆಂಡ್ ಹೊಸದೇನಲ್ಲ. ಇದು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಸಿನಿಮಾ ಇತಿಹಾಸದಲ್ಲಿ ಅತ್ಯಂತ ದುಬಾರಿ ಸಿನಿಮಾಗಳು ದಶಕಗಳ ಹಿಂದೆಯೇ ನಿರ್ಮಿಸಲ್ಪಟ್ಟಿವೆ. ಪ್ರಸ್ತುತ ಲೆಕ್ಕಾಚಾರಗಳ ಪ್ರಕಾರ, ಈ ಒಂದು ಸಿನಿಮಾವನ್ನು ಇತಿಹಾಸದಲ್ಲೇ ನಂ. 1 ದೊಡ್ಡ ಸಿನಿಮಾ ಎಂದು ಕರೆಯಬಹುದು. ಈ ಸಿನಿಮಾ ಕೆಲವು ವರ್ಷಗಳ ಹಿಂದೆ ಪ್ರಾರಂಭವಾಯಿತು. ಆದಾಗ್ಯೂ, ಇದು ಇನ್ನೂ ಬಿಡುಗಡೆಯಾಗಿಲ್ಲ. ಅಂದಹಾಗೆ ಆ ಚಿತ್ರದ ಹೆಸರು ಮರುಧನಾಯಗಂ.
ಮರುಧನಾಯಗಂ 18ನೇ ಶತಮಾನದ ಯೋಧ ಮೊಹಮ್ಮದ್ ಯೂಸುಫ್ ಖಾನ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಐತಿಹಾಸಿಕ ಸಿನಿಮಾ ಆಗಿದೆ. ಇದನ್ನು ಹಿಂದಿ, ತಮಿಳು, ತೆಲುಗು ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಸಕಲಕಲಾವಲ್ಲಭ ನಟ ಕಮಲ್ ಹಾಸನ್ ಅವರು 1997ರಲ್ಲಿ ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲು ಮುಂದಾಗಿದ್ದರು. ಈ ಸಿನಿಮಾಗೆ ಕಮಲ್ ಹಾಸನ್ ಮತ್ತು ಬರಹಗಾರ್ತಿ ಸುಜಾತಾ ಅವರು ಜಂಟಿಯಾಗಿ ಚಿತ್ರಕಥೆ ಬರೆದಿದ್ದಾರೆ. ನಾಸರ್, ಸತ್ಯರಾಜ್, ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ಇತರ ನಟರನ್ನು ಸಹ ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು.
ವಿಶೇಷ ಪಾತ್ರಗಳಿಗೆ ಅಮಿತಾಭ್ ಮತ್ತು ರಜನಿಕಾಂತ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ಆ ಆಫರ್ ತಿರಸ್ಕರಿಸಿದ್ದರು. ಹಾಲಿವುಡ್ ತಾರೆ ಹಾಗೂ ಟೈಟಾನಿಕ್ ಖ್ಯಾತಿಯ ನಟಿ ಕೇಟ್ ವಿನ್ಸ್ಲೆಟ್ ಅವರನ್ನು ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಪರಿಗಣಿಸಲಾಗಿತ್ತು. ಚಿತ್ರದ ಪರೀಕ್ಷಾರ್ಥ ಶೂಟಿಂಗ್ಗಾಗಿ ಕಮಲ್ ಹಾಸನ್ ಅವರ ಮಾಜಿ ಪತ್ನಿ ಮತ್ತು ನಟಿ ಸಾರಿಕಾ ಅವರು ಬ್ರಿಟಿಷ್ ಮತ್ತು ಫ್ರೆಂಚ್ ಸೇನಾ ಅಧಿಕಾರಿಗಳು ಹಾಗೂ ಹಿಂದೂ ಮತ್ತು ಮುಸ್ಲಿಂ ಯೋಧರನ್ನು ಪ್ರತಿನಿಧಿಸಲು 7,400 ವೇಷಭೂಷಣಗಳು ಮತ್ತು ಪರಿಕರಗಳನ್ನು ತಯಾರಿಸಿದ್ದರು. ಪರೀಕ್ಷಾರ್ಥ ಚಿತ್ರೀಕರಣವನ್ನು ರಾಜಸ್ಥಾನದ ಜೈಪುರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಮಾಡಲಾಯಿತು. ಆ ಸಮಯದಲ್ಲಿ, ಚಿತ್ರವನ್ನು 80 ರಿಂದ 90 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಪ್ರಾರಂಭಿಸಲಾಯಿತು. ಅಂದರೆ, ಪ್ರಸ್ತುತ ಅಂದಾಜಿನ ಪ್ರಕಾರ ಇದು 650 ಕೋಟಿ ರೂ.ಗಳವರೆಗೆ ಇರಬಹುದು.
ದೊಡ್ಡ ತಾರಾಬಳಗದೊಂದಿಗೆ ಆರಂಭವಾದ ಈ ಚಿತ್ರವನ್ನು 1998ರಲ್ಲಿ ನಿಲ್ಲಿಸಲಾಯಿತು. ಮರುಧನಾಯಗಂ ಚಿತ್ರವನ್ನು ಸಹ-ನಿರ್ಮಾಣ ಮಾಡಬೇಕಿದ್ದ ಬ್ರಿಟಿಷ್ ಕಂಪನಿಯೊಂದು ಮಧ್ಯದಲ್ಲಿ ಹಿಂದೆ ಸರಿದಾಗ ಇದ್ದಕ್ಕಿದ್ದಂತೆ ಈ ಯೋಜನೆ ಸ್ಥಗಿತಗೊಂಡಿತು. ಬ್ರಿಟಿಷ್ ನಿರ್ಮಾಣ ಕಂಪನಿ ಹಿಂತೆಗೆದುಕೊಂಡಿದ್ದರಿಂದ ಉಂಟಾದ ಆರ್ಥಿಕ ನಿರ್ಬಂಧಗಳು ಒಂದು ಅಡಚಣೆಯಾಯಿತು. ಚಿತ್ರ ಪೂರ್ಣಗೊಂಡಿಲ್ಲ ಮತ್ತು ಇನ್ನೂ ಬಿಡುಗಡೆಯಾಗಿಲ್ಲ. ಈ ಯೋಜನೆಯು ಇದ್ದ ಸ್ಥಳದಲ್ಲಿಯೇ ಉಳಿದಿದೆ. ಬ್ರಿಟಿಷ್ ಕಂಪನಿಯು ಹಿಂದೆ ಸರಿಯದಿದ್ದರೆ, ಈ ಚಿತ್ರವು ಖಂಡಿತವಾಗಿಯೂ ಪೂರ್ಣಗೊಂಡು ಬಿಡುಗಡೆಯಾಗುತ್ತಿತ್ತು ಮತ್ತು ಅನೇಕ ದಾಖಲೆಗಳನ್ನು ಸೃಷ್ಟಿಸುತ್ತಿತ್ತು.
ಅಂದಹಾಗೆ ಬ್ರಿಟಿಷ್ ಕಂಪನಿಯು ಈ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯಲು ಕಾರಣ ಭಾರತದಲ್ಲಿ ನಡೆದ ಪೋಖ್ರಾನ್ ಪರಮಾಣು ಬಾಂಬ್ ಪರೀಕ್ಷೆ. ಈ ಪರೀಕ್ಷೆಗೆ ತೀವ್ರ ವಿರೋಧವಿತ್ತು. ಆದರೂ ನಮ್ಮ ಪರಮಾಣು ಪರೀಕ್ಷೆಗಳ ನಾಯಕ ಅಬ್ದುಲ್ ಕಲಾಂ ಅವರು ಈ ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದರು. ಈ ಮೂಲಕ ಕಮಲ್ ಅವರ ಮರುಧನಾಯಗಂ ಸಿನಿಮಾ ನಿಲ್ಲಲು ಪರೋಕ್ಷವಾಗಿ ಕಾರಣರಾಗಿದ್ದರು. ಆದಾಗ್ಯೂ, ಕಮಲ್ ಹಾಸನ್ ಅವರು ಈ ಸಿನಿಮಾ ತಮ್ಮ ಕನಸಿನ ಯೋಜನೆ ಎಂದು ಹೇಳುತ್ತಾರೆ. ಆದರೆ ಈಗ, ಚಿತ್ರದ ಸ್ಕ್ರಿಪ್ಟ್ ಅನ್ನು ಪುನರುಜ್ಜೀವನಗೊಳಿಸಲು, ಕಮಲ್ ಹಾಸನ್ ಗಮನಾರ್ಹ ಬದಲಾವಣೆಗಳೊಂದಿಗೆ ಯುವ ನಾಯಕನ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರ ಎಂದಾದರೂ ಬಿಡುಗಡೆಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)