

ಬೆಂಗಳೂರು: ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಸರಣಿಯ ಅಂತಿಮ ಟಿ-20 ಪಂದ್ಯ ಬುಧವಾರ ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಲು ಟೀಂ ಇಂಡಿಯಾ ಸಜ್ಜಾಗಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೆಸರಿನಲ್ಲಿ ಈಗಾಗಲೇ ಹಲವು ದಾಖಲೆಗಳಿದ್ದು, ಈ ಪಂದ್ಯದ ಮೂಲಕ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಳ್ಳಲು ಸಜ್ಜಾಗಿದ್ದಾರೆ.
ಟಿ-20 ಕ್ರಿಕೆಟ್ನಲ್ಲಿ ಈಗಾಗಲೇ 11,994 ರನ್ಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಬುಧವಾರ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಸರಣಿಯ ಅಂತಿಮ ಹಾಗೂ ಮೂರನೇ ಪಂದ್ಯದಲ್ಲಿ 6 ರನ್ ಗಳಿಸಿದರೆ ಟ-20 ಕ್ರಿಕೆಟ್ನಲ್ಲಿ ವೇಗವಾಗಿ 12 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಈವರೆಗೂ 116 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 4,037 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ 237 ಪಂದ್ಯಗಳಿಂದ 7,263 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ಟಿ-20 ಕ್ರಿಕೆಟ್ನಲ್ಲಿ 11,994 ರನ್ ಗಳಿಸಿದ್ದಾರೆ. ಇನ್ನು ಆರು ರನ್ಗಳಿಸಿದಲ್ಲಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯ್ನೂ ಕೊಹ್ಲಿ ತಮ್ಮದಾಗಿಸಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ, ದೇಶಿ ಸೇರಿದಂತೆ 463 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 14,562 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ ಪಾಕಿಸ್ತಾನದ ಶೋಯೆಬ್ ಮಲಿಕ್ 525 ಪಂದ್ಯಗಳಲ್ಲಿ 12,993 ರನ್, ಇನ್ನೊಬ್ಬ ಕೆರೆಬಿಯನ್ ಆಟಗಾರ ಕೀರಾನ್ ಪೊಲಾರ್ಡ್ 639 ಪಂದ್ಯಗಳಲ್ಲಿ 12,430 ರನ್ ಗಳಿಸಿದ್ದಾರೆ. ಇದೀಗ ಕೊಹ್ಲಿ 12,000 ರನ್ ಪೂರೈಸಿದ ನಾಲ್ಕನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.