ಬೆಂಗಳೂರು: ಕೆ.ಆರ್. ಪುರದ ವೆಂಗಯ್ಯನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ (ಜ. 21) ‘ವಿಜಯವಾಣಿ’ ಹಾಗೂ ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ‘ಸ್ವಯಂವರ ಪಾರ್ವತಿ ಯಾಗ’ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಯಾಗ ಆರಂಭವಾಗಲಿದ್ದು, ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಪಾಲ್ಗೊಂಡವರಿಗೆ ವಿವಾಹ ತೊಡಕುಗಳು ನಿವಾರಣೆಯಾಗಲಿದೆ.
ಯಾಗದಿಂದ ಕಂಕಣಬಲ: ಸ್ವಯಂವರ ಪಾರ್ವತಿ ಯಾಗದಲ್ಲಿ ಪಾಲ್ಗೊಳ್ಳುವ ಭಾವೀ ವಧು ಮತ್ತು ವರರಿಗೆ ಅತೀ ಶೀಘ್ರವಾಗಿ ಕಂಕಣ ಭಾಗ್ಯ ಕೂಡಿ ಬರುವ ನಂಬಿಕೆ ಇದೆ. ಪುರಾಣಗಳ ಪ್ರಕಾರ, ಸ್ವಯಂವರ ಮಂತ್ರ ಉಪದೇಶದ ನಂತರ ಶಿವ-ಪಾರ್ವತಿ ಯಾಗ ಮಹತ್ವ ಪಡೆದಿದೆ. ಪೂರ್ವಜನ್ಮದ ದೋಷಗಳಿಂದಲೂ ಮದುವೆ ವಿಳಂಬ ಆಗುತ್ತಿರುತ್ತದೆ. ಯಾಗ ಮಾಡಿದರೆ ಎಲ್ಲ ದೋಷಗಳು ಪರಿಹಾರಗೊಳ್ಳುತ್ತವೆ. ಭಾವೀ ವಧು-ವರರು ಮಾತ್ರವಲ್ಲ, ಸಂಸಾರದಲ್ಲಿ ನೆಮ್ಮದಿ ಇಲ್ಲದವರೂ ಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ಶಾಂತಿ ಹೊಂದಬಹುದಾಗಿದೆ.
ಪೌರಾಣಿಕ ಹಿನ್ನೆಲೆ: ಪರಮೇಶ್ವರನೊಂದಿಗೆ ಪಾರ್ವತಿ ಜಗಳ ಮಾಡಿಕೊಂಡು ಭೂಲೋಕಕ್ಕೆ ಬರುತ್ತಾಳೆ. ಆಗ ಪಾರ್ವತಿ ಮರೆತ ಶಿವನು ಏಕಾಂತಕ್ಕೆ ಹೋಗುತ್ತಾನೆ. ಇದರಿಂದ ಲಯಕಾರ್ಯಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಈ ಪರಿಸ್ಥಿತಿ ಅರಿತ ಋಷಿಮುನಿಗಳು ಹಾಗೂ ದೇವತೆಗಳು ಪ್ರಾರ್ಥನೆ ಮೂಲಕ ಶಿವನನ್ನು ಎಚ್ಚರಿಸಲು ಪ್ರಯತ್ನಿಸುತ್ತಾರೆ. ಇತ್ತ ಭೂ ಲೋಕದಲ್ಲಿದ್ದ ಪಾರ್ವತಿ, ಶಿವಲಿಂಗ ರಚಿಸಿ ತಪಸ್ಸು ಮಾಡುತ್ತಿರುತ್ತಾಳೆ. ಈ ವೇಳೆ ನಾರದರು ಆಗಮಿಸಿ ಸ್ವಯಂವರ ಮಂತ್ರ ಉಪದೇಶಿಸುತ್ತಾರೆ. ಪಾರ್ವತಿ ಈ ಮಂತ್ರವನ್ನು ಜಪಿಸಿದಾಗ ಶಿವನು ಎಚ್ಚರ ಗೊಂಡು ಭೂಲೋಕಕ್ಕೆ ಆಗಮಿಸುತ್ತಾನೆ. ನಂತರ ಪಾರ್ವತಿಯನ್ನು ವಿವಾಹವಾಗಿ ಕೈಲಾಸಕ್ಕೆ ಕರೆದೊಯುತ್ತಾನೆ. ಕೆಲವರಿಗೆ ಪೂರ್ವಜನ್ಮದ ಯಾವುದೋ ದೋಷಗಳು ವಿವಾಹ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತವೆ. ಅಂಥವರು ಪಾರ್ವತಿ ಸ್ವಯಂ ವರ ಹೋಮ ಮಾಡಿಸಿ, ಪ್ರಸಾದ ಸ್ವೀಕರಿಸಿದರೆ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ.
ಜಾತಕ ತನ್ನಿ: ಸ್ವಯಂವರ ಪಾರ್ವತಿ ಯಾಗದಿಂದ ಜೀವನ ಸಂಗಾತಿ ಶೀಘ್ರ ದೊರಕಲು ಅನು ವಾಗುತ್ತದೆ. ಯಾಗದಲ್ಲಿ ಪಾಲ್ಗೊಳ್ಳುವ ಭಾವೀ ವಧು-ವರರು ತಮ್ಮ ಭಾವ ಚಿತ್ರದೊಂದಿಗೆ ಜಾತಕವನ್ನು ತರುವಂತೆ ಕೋರಲಾಗಿದೆ.
ಸ್ಥಳ: ಶ್ರೀ ಮಹಾಬಲೇಶ್ವರ ಸ್ವಾಮಿ ದೇವ ಸ್ಥಾನ, ವೆಂಗಯ್ಯನಕೆರೆ ಅಚ್ಚುಕಟ್ಟು, ಕೆ.ಆರ್. ಪುರ, ಬೆಂಗಳೂರು- 560036.