ಎಸ್​ಆರ್​ಎಚ್​ ಫ್ಯಾನ್ಸ್​ ನಡುವೆ ಆರ್​ಸಿಬಿ ಅಭಿಮಾನಿಯ ಕೂಗಾಟ; ನೋಡ ನೋಡ ಎಷ್ಟು ಚೆಂದ ಎಂದ ಫ್ಯಾನ್ಸ್​

RCB Fan
Published on

ಹೈದರಾಬಾದ್: ಏಪ್ರಿಲ್​ 25ರಂದು ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರ್​ಸಿಬಿ ಹಾಗೂ ಎಸ್​ಆರ್​ಎಚ್​ ನಡುವಿನ ಐಪಿಎಲ್ ಪಂದ್ಯದಲ್ಲಿ ಫಾಫ್​ ಡು ಪ್ಲೆಸಿಸ್​ ಪಡೆಯೂ 35 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಪ್ಲೇ ಆಫ್​ ಆಸೆಯನ್ನು ಸ್ವಲ್ಪಮಟ್ಟಿಗೆ ಜೀವಂತವಾಗಿರಿಸಿಕೊಂಡಿದೆ. ಇನ್ನು ಪಂದ್ಯದ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋವನ್ನು ನೋಡುವುದಾದರೆ ಆರ್​ಸಿಬಿ ಅಭಿಮಾನಿಯೋರ್ವ ಸ್ಟೇಡಿಯಂನಲ್ಲಿನ ಸ್ಟ್ಯಾಂಡ್‌ವೊಂದರಲ್ಲಿ ಎಸ್​ಆರ್​ಎಚ್​​​ ಫ್ಯಾನ್ಸ್​ಗೆ ಸುಮ್ಮನಿರುವಂತೆ ಆಕ್ರಮಣಕಾರಿಯಾಗಿ ಸೂಚಿಸುತ್ತಿರುವುದನ್ನು ನೋಡಬಹುದಾಗಿದೆ. ಇದಲ್ಲದೆ ಆರ್​ಸಿಬಿ ಅಭಿಮಾನಿಗಳ ಗುಂಪೊಂದು ತುಟಿಗಳ ಮೇಲೆ ಬೆರಳಿಟ್ಟು ಎಸ್​ಆರ್​ಎಚ್​ ಅಭಿಮಾನಿಗಳ ಪೋಸ್ಟ್​ ಒಂದಕ್ಕೆ ಪ್ರತಿಕ್ರಿಯಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್​ ಸೃಷ್ಟಿಸಿದೆ.

ಇದಲ್ಲದೆ ಮೈದಾನದಲ್ಲಿ ವಿರಾಟ್​ ಕೊಹ್ಲಿ ನಗುತ್ತಿರುವುದು ಹಾಗೂ ಆರ್​ಸಿಬಿ ಬೌಲರ್​ಗಳ ಆರ್ಭಟಕ್ಕೆ ಎಸ್​ಆರ್​ಎಚ್​ ಸಿಇಒ ಕಾವ್ಯಾ ಮಾರನ್​ ರಿಯಾಕ್ಷನ್​ ಕೂಡ ವೈರಲ್​ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉಭಯ ತಂಡಗಳ ಅಭಿಮಾನಿಗಳ ನಡುವೆ ಫ್ಯಾನ್​ವಾರ್​ ಜೋರಾಗಿ ನಡೆಯುತ್ತಿದೆ.

ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 41ನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ತಂಡವು ರಜತ್​ ಪಾಟೀದಾರ್ (50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್), ವಿರಾಟ್​ ಕೊಹ್ಲಿ (51 ರನ್, 43 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 206 ರನ್​ಗಳಿಸಿತ್ತು. ಬೃಹತ್​ ಗುರಿ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಆರ್​ಸಿಬಿ ಬೌಲರ್​ಗಳು ಎದುರಾಳಿ ತಂಡವನ್ನು 171 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net