

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 41ನೇ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 35 ರನ್ಗಳ ಜಯ ಸಾಧಿಸುವ ಮೂಲಕ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ರಜತ್ ಪಾಟೀದಾರ್ (50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್), ವಿರಾಟ್ ಕೊಹ್ಲಿ (51 ರನ್, 43 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ಗಳಿಸಿತ್ತು. ಬೃಹತ್ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಆರ್ಸಿಬಿ ಬೌಲರ್ಗಳು ಎದುರಾಳಿ ತಂಡವನ್ನು 171 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಇನ್ನು ಪಂದ್ಯದ ಬಳಿಕ ಗೆಲುವಿನ ಕುರಿತು ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್, ಕಳೆದ ಎರಡು ಪಂದ್ಯಗಳಲ್ಲಿ ನಾವು ಉತ್ತಮವಾಗಿ ಆಟವಾಡಿದ್ದೇವೆ. ಎಸ್ಆರ್ಎಚ್ ವಿರುದ್ಧ 260+ ಗಳಿಸಿ ಮತ್ತು ಕೆಕೆಆರ್ ವಿರುದ್ಧ 1 ರನ್ ಸೋಲು ಕಂಡೆವು. ಆದರೆ, ನಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ನಾನು ಇಂದಿನಿಂದ ಆರಾಮಾಗಿ ಮಲಗಬಹುದು ಎಂದುಕೊಂಡಿದ್ದೇನೆ. ಏಕೆಂದರೆ ನಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಇರುವ ಏಕೈಕ ವಿಷಯವೆಂದರೆ ಅದು ಉತ್ತಮ ಪ್ರದರ್ಶನ ಎಂದಿದ್ದಾರೆ.
ಮೊದಲಾರ್ಧದ ನಂತರ ಇತರ ಬ್ಯಾಟ್ಸ್ಮನ್ಗಳು ವಿರಾಟ್ ಕೊಹ್ಲಿಗೆ ಅಗತ್ಯ ನೆರವು ನೀಡುತ್ತಿರುವುದು ಖುಷಿ ತರಿಸಿದೆ. ಸ್ಪರ್ಧೆಯೂ ತುಂಬಾ ಪ್ರಬಲವಾಗಿದ್ದು, ಶೇ. 100ರಷ್ಟು ನೀಡದಿದ್ದಾಗ ಮಾತ್ರ ಅದು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಬ್ಯಾಟಿಂಗ್ ವೇಳೆ ನಾವು ಕೆಲವು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡೆವು ಇದು ನಮ್ಮ ರನ್ ವೇಗದ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಅಂತಿಮವಾಗಿ ಬೌಲರ್ಗಳು ಪಂದ್ಯವನ್ನು ನಮ್ಮತ್ತ ತಿರುಗಿಸುವಲ್ಲಿ ಯಶಸ್ವಿಯಾದರು ಎಂದು ನಾಯಕ ಫಾಫ್ ಡು ಪ್ಲೆಸಿಸ್ ಆರ್ಸಿಬಿ ಗೆಲುವಿನ ಕುರಿತು ಹೇಳಿದ್ದಾರೆ.