ದಿಸ್ಪುರ್: ರೈಲು ಅಪಘಾತದ ಸುದ್ದಿ ಅಥವಾ ರೈಲ್ವೆ ಹಳಿ ಬಳಿ ಸಿಲಿಂಡರ್ ಪತ್ತೆಯಾದ ಸುದ್ದಿಗಳನ್ನು ನಾವು ನೋಡುತ್ತೇವೆ. ಇದೇ ರೀತಿ ನಡೆಯಬೇಕಾದ ಅಪಘಾತವೊಂದು ಲೊಕೊ ಪೈಲಟ್ ಅವರ ಸಮಯಪ್ರಜ್ಞೆಯಿಂದ ತಪ್ಪಿದೆ. ಸದ್ಯ ವಿಡಿಯೋವೊಂದು(Viral Video) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ರೈಲ್ವೆ ಹಳಿ ಮೇಲೆ ಆನೆಗಳ ಹಿಂಡು ಧಾವಿಸುವುದನ್ನು ಕಾಣಬಹುದಾಗಿದೆ. ಈ ಘಟನೆ ಅಸ್ಸಾಂನಲ್ಲಿ ನಡೆದಿದೆ ಎನ್ನಲಾಗಿದೆ.
ಇದನ್ನು ಓದಿ: ವಾಹನದ ಬಾನೆಟ್ ಮೇಲೆ ಕಾಡಿನ ರಾಜ; ಸಿಂಹದ ಫೋಸ್ಗೆ ನೆಟ್ಟಿಗರು ಏನಂದ್ರು ಗೊತ್ತಾ? | Viral Video
ವಾಸ್ತವವಾಗಿ ರೈಲು ಸಂಖ್ಯೆ 15959 ಕಾಮ್ರೂಪ್ ಎಕ್ಸ್‌ಪ್ರೆಸ್ ಗುವಾಹಟಿಯಿಂದ ಲುಮ್‌ಡಿಂಗ್‌ಗೆ ಹೋಗುತ್ತಿತ್ತು. ರಾತ್ರಿ 8:30ರ ಸುಮಾರಿಗೆ ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಇದ್ದಕ್ಕಿದ್ದಂತೆ 60ಕ್ಕೂ ಹೆಚ್ಚು ಆನೆಗಳನ್ನು ರೈಲ್ವೆ ಹಳಿ ಮೂಲಕ ಹಾದು ಹೋಗುತ್ತಿರುವುದನ್ನು ನೋಡಿದ್ದಾರೆ. ಆನೆಗಳ ಹಿಂಡನ್ನು ಕಂಡ ತಕ್ಷಣ ಲೊಕೊ ಪೈಲಟ್ ಎಮೆರ್ಜೆನ್ಸಿ ಬ್ರೇಕ್ ಹಾಕಿ ಭಾರಿ ಅನಾಹುತ ತಪ್ಪಿಸಿದ್ದಾರೆ.
ಲೊಕೊ ಪೈಲಟ್ ತಕ್ಷಣ ಯೋಚಿಸದಿದ್ದರೆ ಹಲವು ಆನೆಗಳು ಮೃತಪಡುತ್ತಿದ್ದವು ಜತೆಗೆ ರೈಲು ಕೂಡ ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು. ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಆನೆಗಳ ಜತೆಗೆ ಅವುಗಳ ಮಕ್ಕಳೂ ಹೇಗೆ ಹಿಂಡಿನಲ್ಲಿ ಸೇರಿಕೊಂಡಿವೆ ಎಂಬುದನ್ನು ಕಾಣಬಹುದು. ಎಲ್ಲಾ ಆನೆಗಳು ನಿಧಾನವಾಗಿ ರೈಲು ಹಳಿ ದಾಟುತ್ತಿವೆ. ಈ ಆನೆಗಳ ಹಿಂಡು ಸಾಕಷ್ಟು ದೊಡ್ಡದಾಗಿದೆ. ಆನೆಗಳು ಹೋಗುವವರೆಗೂ ರೈಲನ್ನು ನಿಲ್ಲಿಸಿ ಕಾಯ್ದಿದ್ದಾರೆ. ಇನ್ನೂ ಅನೇಕ ಜನರು ಟಾರ್ಚ್ ಆನ್ ಮಾಡಿರುವುದನ್ನು ನೋಡಬಹುದು.
ಆನೆಗಳು ಹೋದ ನಂತರ ಕೆಲವರು ಮುಂದೆ ಹೋಗಿ ಎಲ್ಲಾ ಆನೆಗಳು ಹೋಗಿವೆಯೋ ಇಲ್ಲವೋ ಎಂದು ಪರೀಕ್ಷಿಸಿ ರೈಲನ್ನು ಸ್ಟಾರ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಇಡೀ ಘಟನೆಯ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಈ ವಿಡಿಯೋ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
Incredible sight ! A big shout-out to Loco Pilot Das and Assistant Loco Pilot Umesh Kumar of the 15959 Kamrup Express for their swift and heroic action on 16th October in saving a herd of about 60 elephants crossing the railway tracks between Habaipur and Lamsakhang by applying… pic.twitter.com/otfQ3nwjDJ
— Supriya Sahu IAS (@supriyasahuias) October 18, 2024
ಈ ವಿಡಿಯೋವನ್ನು ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದವರು ಪ್ರತಿಕ್ರಿಯಿಸುತ್ತಿದ್ದು ಹಲವರು ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಅನ್ನು ಹೊಗಳಿದ್ದಾರೆ. (ಏಜೆನ್ಸೀಸ್)
ಮೆಟ್ರೋ ಟ್ರ್ಯಾಕ್ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವ್ಯಕ್ತಿ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೀಗೆ | Viral Video