

ರಾಜಸ್ಥಾನ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಸುಮಾರು 33 ವರ್ಷಗಳ ಬಳಿಕ ಮನೆಗೆ ಹಿಂತಿರುಗಿ ಎಲ್ಲರನ್ನೂ ಅಚ್ಚರಿಗೊಳಿಸಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ದೆಹಲಿಯ ಖಾರಿ ಬಾವೊಲಿಯಲ್ಲಿ ಕೆಲಸ ಮಾಡುತ್ತಿದ್ದ 75 ವರ್ಷದ ಹನುಮಾನ್ ಸೈನಿ ಎಂಬುವರು 1989ರಲ್ಲಿ ಹಠಾತ್ತನೆ ನಾಪತ್ತೆಯಾಗಿದ್ದರು. ಇದೀಗ ಮೂರು ದಶಕಗಳ ಬಳಿಕ ಕಳೆದ ಮೇ 30 ರಂದು ಅಲ್ವಾರ್ ಜಿಲ್ಲೆಯ ಬನ್ಸೂರ್ ಗ್ರಾಮದಲ್ಲಿರುವ ತನ್ನ ಮನೆಗೆ ಹಿಂತಿರುಗಿದ್ದಾರೆ.
ಹನುಮಾನ್ ಸೈನಿಗಾಗಿ ಕುಟುಂಬಸ್ಥರು ಸಾಕಷ್ಟು ಕಡೆ ಹುಡುಕಾಡಿದ್ದಾರೆ. ಆದರೆ ಕೆಲಸಕ್ಕೆಂದು ದೆಹಲಿ ಹೋಗಿದ್ದವರು, ಅಲ್ಲಿಂದ ಎಲ್ಲಿಗೆ ತೆರಳಿದ್ದಾರೆ ಎಂದು ಗೊತ್ತಾಗಿರಲಿಲ್ಲ. ಕೊನೆಗೆ ಸೈನಿಯನ್ನು ಹುಡುಕುವ ಭರವಸೆ ಕಳೆದುಕೊಂಡಿದ್ದ ಕುಟುಂಬ ಮೃತಪಟ್ಟಿದ್ದಾರೆ ಎಂದು ನಿರ್ಧರಿಸಿ, ಅಂತ್ಯಕ್ರಿಯೆಗಳನ್ನು ನಡೆಸಿದ್ದರು. ಅಲ್ಲದೆ ಹನುಮಾನ ಸೈನಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆಕೊಂಡಿದ್ದರು.
ತಾನು ಮರಳಿ ಬಂದಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಹನುಮಾನ್ ಸೈನಿ, ' ಕಳೆದ 33 ವರ್ಷಗಳಿಂದ ಹಿಮಾಚಲ ಪ್ರದೇಶದ 'ಕಂಗ್ರಾ ಮಾತಾ' ದೇವಸ್ಥಾನದಲ್ಲಿ ದೇವಿಯ ಭಕ್ತಿಯಲ್ಲಿ ಧ್ಯಾನ ಮಾಡುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ.
ದೆಹಲಿಯಲ್ಲಿದ್ದ ಸಮಯದಲ್ಲಿ 'ಕಂಗ್ರಾ ಮಾತಾ' ದಿಂದ ಕರೆ ಬಂದಿತ್ತು. ಹೀಗಾಗಿ ಅಲ್ಲಿಗೆ ತೆರಳಿ ಧ್ಯಾನಸ್ಥನಾಗಿದ್ದೆ. ಇದೀಗ 33 ವರ್ಷಗಳ ಸುದೀರ್ಘ ಧ್ಯಾನದ ನಂತರ, ದೇವಿಯು ಮನೆಗೆ ಹಿಂತಿರುಗುವಂತೆ ಸೂಚಿಸಿದಳು. ಹಿಮಾಚಲಕ್ಕೆ ತೆರಳಲು ರೈಲು ಹತ್ತಿದಾಗ ನನ್ನಲ್ಲಿ ಟಿಕೆಟ್ಗಾಗಿ ಕೇವಲ 20 ರೂಪಾಯಿ ಮಾತ್ರ ಇತ್ತು. ಇದೀಗ ಕಂಗ್ರಾ ಮಾತಾ ದೇವಸ್ಥಾನ ತಲುಪಿ 33 ವರ್ಷಗಳ ಕಾಲ ಸೇವೆ ಮಾಡಿದ್ದರಿಂದ ದೇವಿಯ ದೆಯೆಗೆ ಪಾತ್ರನಾಗಿದ್ದೇನೆ. ಈ ನಡುವೆ ಕೊಲ್ಕತಾದ ಗಂಗಾಸಾಗರ್ ಮತ್ತು ಕಾಳಿ ಮೈಯಾ ದೇವಸ್ಥಾನಕ್ಕೆ ಹೋಗಿದ್ದೆ ಎಂದು ಹನುಮಾನ್ ಸೈನಿ ಪ್ರತಿಕ್ರಿಯಿಸಿದ್ದಾರೆ.
ಹನುಮಾನ್ ಸೈನಿಯ ಮೂವರು ಹೆಣ್ಣು ಮಕ್ಕಳಿಗೂ, ಎರಡು ಜನ ಗಂಡು ಮಕ್ಕಳಿಗೂ ಸದ್ಯ ಮದುವೆಯಾಗಿದೆ. ತಂದೆ ನಾಪತ್ತೆಯಾದ ನಂತರ, ಅವರು ಜೀವಂತವಾಗಿ ಸಿಗುವ ಭರವಸೆಯನ್ನು ಕುಟುಂಬ ಕಳೆದುಕೊಂಡಿತ್ತು. ಹೀಗಾಗಿ ಕಳೆದ ವರ್ಷ ನ್ಯಾಯಾಲಯದ ಮೂಲಕ ಮರಣ ಪ್ರಮಾಣಪತ್ರ ಪಡೆದುಕೊಂಡಿದ್ದೆವು. ಇದೀಗ 33 ವರ್ಷಗಳ ನಂತರ ತಂದೆ ಮನೆಗೆ ಹಿಂತಿರುಗಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ ಎಂದು ಹನುಮಾನ್ ಸೈನಿಯ ಹಿರಿಯ ಪುತ್ರ ರಾಮಚಂದ್ರ ಸೈನಿ ಹೇಳಿಕೊಂಡಿದ್ದಾರೆ.