ನವದೆಹಲಿ: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿರುವುದು ಗೊತ್ತೇ ಇದೆ. ನಿಗದಿತ ತೂಕಕ್ಕಿಂತ ಸುಮಾರು 150 ಗ್ರಾಂಗಳಷ್ಟು ಭಾರವಿರುವ ಕಾರಣ ಫೈನಲ್‌ನಲ್ಲಿ ಸ್ಪರ್ಧಿಸಲು ಅನರ್ಹರಾದರು. ಈ ಸುದ್ದಿ ಕೇವಲ ಕ್ರೀಡಾಭಿಮಾನಿಗಳನ್ನು ಮಾತ್ರವಲ್ಲದೆ ಎಲ್ಲ ಭಾರತೀಯರನ್ನು ಆಘಾತಕ್ಕೆ ದೂಡಿದೆ.
ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ವಿನೇಶ್ ಕ್ಯೂಬಾದ ಉಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್ ತಲುಪಿದರು. ಫೈನಲ್ ಪಂದ್ಯಕ್ಕೂ ಮುನ್ನ ಮಂಗಳವಾರ ಆಕೆಯ ತೂಕವನ್ನು ಪರಿಶೀಲಿಸಲಾಯಿತು. ವಿನೇಶ್ ಕೆಲವು ಗ್ರಾಂಗಳಷ್ಟು ತೂಕವನ್ನು ಹೊಂದಿದ್ದರಿಂದ ಅನರ್ಹಗೊಳಿಸಲಾಯಿತು. ಇದರಿಂದ ಭಾರತೀಯರ ಚಿನ್ನದ ಪದಕದ ಆಸೆ ನಿರಾಸೆಯಾಗಿದೆ.
ತೂಕ ಹೆಚ್ಚಾಗಿರುವುದು ವಿನೇಶ್ ಅವರ ಅರಿವಿಗೆ ಬಂದಾಗ, ಅವರು ಕೂಡ ತೂಕ ನಷ್ಟಕ್ಕೆ ಹರಸಾಹಸ ಪಟ್ಟಿದ್ದಾರೆಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ವೇಳೆಗೆ ವಿನೇಶ್ ತೂಕ ನಿಗದಿತ 50 ಕೆಜಿಗಿಂತ 2 ಕೆಜಿ ಹೆಚ್ಚಿತ್ತು ಎನ್ನಲಾಗಿದೆ. ಅದನ್ನು ಇಳಿಸಲು ರಾತ್ರಿಯಿಡೀ ಶ್ರಮಿಸಿದ್ದಾರೆ. ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಮಾಡಿದ್ದಾರೆ. ಈ ರೀತಿ ಮಾಡಿದರೂ ನಿರೀಕ್ಷಿತ ಫಲಿತಾಂಶ ಬರದ ಕಾರಣ, ಆಕೆಯ ಕೋಚ್ ಮತ್ತು ಸಿಬ್ಬಂದಿ ಸೇರಿ ವಿನೇಶ್ ದೇಹದಿಂದ ಸ್ವಲ್ಪ ರಕ್ತವನ್ನು ಸಹ ತೆಗೆದಿದ್ದಾರೆ. ಅಲ್ಲದೆ, ಆಕೆಯ ಕೂದಲನ್ನೂ ಸಹ ಕತ್ತರಿಸಿದ್ದಾರೆ. ಇಷ್ಟೆಲ್ಲ ಪ್ರಯತ್ನಗಳನ್ನು ಮಾಡಿದರೂ ಅಂತಿಮ ಪರೀಕ್ಷೆಯ ವೇಳೆ 150 ಗ್ರಾಂ ಅಧಿಕ ತೂಕ ಹೊಂದಿದ್ದರು. ಹೀಗಾಗಿ ಒಲಿಂಪಿಕ್ಸ್ ಸಂಘಟಕರು ಆಕೆಯನ್ನು ಅನರ್ಹಗೊಳಿಸಿದರು. ಇದರ ಪರಿಣಾಮ ಆಕೆ ಯಾವುದೇ ಪದಕ ಪಡೆಯದೇ ಹಿಂತಿರುಗಬೇಕಾಗಿದೆ.
ವಿನೇಶ್ ಅವರು ತೂಕವನ್ನು ಕಳೆದುಕೊಳ್ಳಲು ರಾತ್ರಿಯಿಡೀ ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಮಾಡಿದ ಪರಿಣಾಮ ದೇಹ ಡೀಹೈಡ್ರೇಟ್ ಆಗಿ ತೀವ್ರ ಅಸ್ವಸ್ಥಗೊಂಡರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚೇತರಿಸಿಕೊಂಡಿದ್ದಾರೆ. ದುರದೃಷ್ಟವಶಾತ್ ತೂಕ ಇಳಿಸಿಕೊಳ್ಳಲು ರಾತ್ರಿಯಿಡೀ ನರಕಯಾತನೆ ಅನುಭವಿಸಿದರೂ ಪ್ರಯೋಜನವಿಲ್ಲದಂತಾಗಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕೆಂದು ಆಶಿಸಿದ್ದರು. ಆದರೆ, ಆ ಆಸೆ ವಿನೇಶ್ ಅವರ ಕೈಗೂಡಲಿಲ್ಲ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನಿರಾಶರಾಗಬೇಡಿ ಮತ್ತೆ ಗೆಲುವಿನತ್ತ ಮುನ್ನಡೆಯುವಂತೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ವಿನೇಶ್ ನೀವು ಚಾಂಪಿಯನ್ ಆಫ್ ಚಾಂಪಿಯನ್. ದೇಶಕ್ಕೆ ಹೆಮ್ಮೆಯ ಚಿಲುಮೆ. ನೀವು ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿ. ಒಲಿಂಪಿಕ್ಸ್‌ನಿಂದ ನಿಮ್ಮ ಅನರ್ಹತೆ ನಮಗೆ ತುಂಬಾ ದುಃಖ ತಂದಿದೆ. ನಿಮ್ಮ ನಿರಾಶೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸವಾಲುಗಳನ್ನು ಎದುರಿಸಿ ಹೋರಾಡುವುದು ನಿಮ್ಮ ಸ್ವಭಾವ. ಮತ್ತೆ ಗೆಲುವಿನತ್ತ ಸಾಗಬೇಕು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ವಿನೇಶ್ಗೆ ನೆರವಾಗಲು ಸಾಧ್ಯವಿರುವ ಎಲ್ಲ ಅಂಶಗಳನ್ನು ಪರಿಶೀಲಿಸುವಂತೆ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಆದೇಶ ನೀಡಲಾಗಿದೆ. (ಏಜೆನ್ಸೀಸ್)
ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಅನಾರೋಗ್ಯದಿಂದ ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು!
3 ವರ್ಷ ಒಂದೇ ಬೆಡ್, 23 ಸರ್ಜರಿ, ಮತ್ತೆಂದೂ ನಡೆಯಲಾಗದ ಪರಿಸ್ಥಿತಿ: ನೋವಿನ ಸಂಗತಿ ಬಿಚ್ಚಿಟ್ಟ ನಟ ವಿಕ್ರಮ್