

ವಿಜಯಪುರ : ಧರ್ಮ ಒಡೆದವರಿಗೆ, ಧರ್ಮಗುರುಗಳ ಮೇಲೆ ಚಪ್ಪಲಿ ಎಸೆದವರಿಗೆ ನಮ್ಮ ಪಕ್ಷದಲ್ಲಿ ಪ್ರವೇಶ ಇಲ್ಲ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪ್ರತಿಕ್ರಿಯಿಸಿದರು.
ಲಿಂಗಾಯತ ಹೋರಾಟದ ಮುಂಚೂಣಿ ನಾಯಕ, ಮುಂಬೈ ಪ್ರಾಂತ್ಯದ ಕಾಂಗ್ರೆಸ್ ನ ಮಾಜಿ ಸಚಿವರೊಬ್ಬರನ್ನು ಬೀಜೆಪಿಗೆ ಆಹ್ವಾನಿಸಲಾಗುತ್ತಿದೆ ಎಂಬ ಗುಸುಗುಸು ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡೋಣಿ ನದಿಯಲ್ಲಿ ಈಜುವ ಚಟ ನನಗಿಲ್ಲ. ಡೋಣಿ ಕೆಲ ಕಾಲ ಅಬ್ಬರಿಸುತ್ತದೆ. ಬಳಿಕ ಬತ್ತಿ ಹೋಗುತ್ತದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ನಮ್ಮ ಪಕ್ಷದೊಳಗೇ 'ಹೊಂದಾಣಿಕೆ' ನಡೀತಿದೆ! ಕಾಂಗ್ರೆಸ್ ಅವಧಿಯಲ್ಲಿದ್ದ ಅಧಿಕಾರಿಗಳೇ ಇನ್ನೂ ಜಿಲ್ಲೆಯಲ್ಲಿದ್ದಾರೆ. ನಮ್ಮವರಿಗೇ ಕೆಲವರಿಗೆ ಬುದ್ದಿಯಿಲ್ಲ. ಅದೇ ಅಧಿಕಾರಿಗಳು ನಮ್ಮನ್ನು ತುಳಿಯುತ್ತಿರುವುದು ಗೊತ್ತಾಗುತ್ತಿಲ್ಲ. ಕೆಲ ಅಧಿಕಾರಿಗಳು ಬೇರೂರಿದ್ದು ಅವರನ್ನು ಎತ್ತಂಗಡಿ ಮಾಡಬೇಕು. ನಮ್ಮ ಪಕ್ಷದಲ್ಲಿಯೇ ಕೆಲ ಹೊಂದಾಣಿಕೆ ರಾಜಕಾರಣ ಇರುವ ಕಾರಣ ಹೀಗಾಗುತ್ತಿದೆ ಎಂದು ವಿಜುಗೌಡ ಖೇದ ವ್ಯಕ್ತಪಡಿಸಿದರು. 140 ಕೋಟಿ ರೂ. ನೀರಾವರಿಗೆ ನಮ್ಮ ಸರ್ಕಾರ ಅನುಮೋದನೆ ನೀಡಿದೆ. ನಮ್ಮ ಸರ್ಕಾರಕ್ಕೆ ಅಭಿನಂದನೆ ಹೇಳುವುದನ್ನು ಬಿಟ್ಟು ನಾನೇ ಅದನ್ನು ಮಾಡಿದ್ದೇನೆ ಎನ್ನುವುದು ಎಷ್ಟು ಸರಿ. ಹೊಂದಾಣಿಕೆ ರಾಜಕಾರಣದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ. ಡಿಸಿಎಂ ಗೋವಿಂದ ಕಾರಜೋಳ ಅವರು ಸಹ ಸಿಎಂ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಆ ಬಗ್ಗೆ ನಾನು ಹೆಚ್ಚೇನೂ ಮಾತಾಡಲ್ಲ ಎಂದರು.
ನಮ್ಮ ಪಕ್ಷ ಧರ್ಮಕ್ಕೆ ಪ್ರಾಧಾನ್ಯತೆ ನೀಡುತ್ತದೆ. ಅಂಥ ಧರ್ಮ ಒಡೆದವರಿಗೆ, ಧರ್ಮಗುರುಗಳಿಗೆ ಅವಮಾನಿಸಿದವರಿಗೆ ನಮ್ಮ ಪಕ್ಷದಲ್ಲಿ ಅವಕಾಶ ನೀಡಲ್ಲ ಎಂಬ ಆತ್ಮ ವಿಶ್ವಾಸ ಇದೆ ಎಂದರು.
ಪಟ್ಟಣ ಪಂಚಾಯಿತಿ ವಿಚಾರ : ಬಬಲೇಶ್ವರ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಿಎಂ ಯಡಿಯೂರಪ್ಪ ಅವರಿಗೆ ಮಾಡಿದ ನನ್ನ ಮನವಿ ಮೇರೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಅದನ್ನೇ ನಾವು ಮಾಡಿದ್ದಾಗಿ ಕಾಂಗ್ರೆಸ್ ಶಾಸಕರು ಕರಪತ್ರ ಹಂಚುತ್ತಿರುವುದು ನಾಚಿಕೆಗೇಡು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಟೀಕಿಸಿದರು.
ಆರು ವರ್ಷ ಅವರೇ ಸಚಿವರಾಗಿದ್ದಾಗ ಆಗದ ಕಾರ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದೀತೆ? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ಬಿಜೆಪಿಗೆ ತಾವೇ ಪತ್ರ ಬರೆದಿದ್ದಾಗಿ ಶಾಸಕರು ಹಂಚುವ ಕರಪತ್ರದಲ್ಲಿ ಕಡತ ಸಂಖ್ಯೆ ಯೂ ತಪ್ಪಾಗಿದೆ. ಕಡತದ ಅಂಕಿ ಸಂಖ್ಯೆ ಅರಿಯದವರಿಂದ ಈ ಕೆಲಸ ಆದೀತೆ ? ನನ್ನ ಶ್ರಮದಿಂದ ಪಟ್ಟಣ ಪಂಚಾಯಿತಿ ಆಗಿದೆ ಎಂದು
ಹೇಳಿಕೊಳ್ಳುವ ಶಾಸಕರಿಗೆ ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿಸಲು ಆಗಲಿಲ್ಲವೇಕೆ? ಎಂದ ವಿಜುಗೌಡರು ಕಾಂಗ್ರೆಸ್ ಶಾಸಕರು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ದುರ್ಬುದ್ದಿ ಬಿಡಬೇಕೆಂದು ಎಂ.ಬಿ. ಪಾಟೀಲ ವಿರುದ್ದ ಹರಿಹಾಯ್ದರು.
ಯಾವುದು ಪ್ರೊಟೊಕಾಲ್: ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲೂ ಕೇಂದ್ರ ಸರ್ಕಾರದ ಯೋಜನೆಯನ್ನೂ ತಾವೇ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. 75 ಲಕ್ಷ ರೂ.ವೆಚ್ಚದ ಎಪಿಎಂಸಿ ಮಾರುಕಟ್ಟೆಯನ್ನು ನಾನು ಮಂಜೂರಿಸಿದರೆ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಬೇರೆ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿದ್ದು ಖೇದಕರ ಎಂದರು.
ರಾಜಕೀಯವಾಗಿ ನಾನು ಸೋತಿರಬಹುದು. ಆದರೆ ನಾನೆಂದೂ ಬಬಲೇಶ್ವರ ಕ್ಷೇತ್ರ ಜನರ ಮನಸಲ್ಲಿ ಎಂದೂ ಸೋತಿಲ್ಲ. ಪ್ರೊಟೊಕಾಲ್ ಪ್ರಕಾರ ಭೂಮಿ ಪೂಜೆ ನೆರೆವೇರಿಸಲು ಬರಲ್ಲ ಎಂದು ನನ್ನ ಬಗ್ಗೆ ಕೇವಲವಾಗಿ ಮಾತನಾಡುವ ಶಾಸಕರು ತಮ್ಮ ಪುತ್ರನಿಂದ ಭೂಮಿ ಪೂಜೆ ನೆರವೇರಿಸಿದ್ದು ಯಾವ ನ್ಯಾಯ? ಪ್ರೊಟೊಕಾಲ್ ಎಂದರೆ ಇದೇನಾ? ಜನ ಮತ ಹಾಕಿದ್ದು ಯಾರಿಗೆ? ತಾಪಂ, ಜಿಪಂ ಸದಸ್ಯರಿಲ್ಲದೇ ತಮ್ಮದೇ ಕುಟುಂಬ ಸದಸ್ಯರೆಲ್ಲರೂ ಗುದ್ದಲಿ ಪೂಜೆ ಮಾಡುವುದು ಪ್ರೋಟೋಕಲ್ ಆಗುತ್ತಾ? ಎಂದು ವಿಜುಗೌಡ ಪ್ರಶ್ನಿಸಿದರು.
ಅತೀವೃಷ್ಟಿ: ಅತೀವೃಷ್ಟಿ ಹಿನ್ನೆಲೆ ಬಬಲೇಶ್ವರ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ಬೆಳೆ ಹಾನಿಯಾಗಿದೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ತ್ವರಿತವಾಗಿ ಪರಿಹಾರ ನೀಡಲು ಮನವಿ ಮಾಡಲಾಗುವುದೆಂದರು.
ಮುಖಂಡರಾದ ಶಿವರುದ್ರ ಬಾಗಲಕೋಟೆ, ಈರಣ್ಣ ಕಿರಣಗೊಂಡ, ಸಾಬು ಮಾಶ್ಯಾಳ, ಅಲ್ಲಿಸಾ ಪಟೇಲ, ಸಂದೀಪ ಪಾಟೀಲ, ಸಾಹೇಬಗೌಡ ಬಿರಾದಾರ, ವಿಜು ಜೋಶಿ ಮತ್ತಿತರರಿದ್ದರು.