

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ. ಪಕ್ಷದ ಕಾರ್ಯಕ್ರಮಗಳಿಗೆ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡುತ್ತಿರುವ ಆರೋಪ ಇಮ್ರಾನ್ ಖಾನ್ ಮೇಲಿದೆ.
ಪ್ರಧಾನಮಂತ್ರಿ ಇಮ್ರಾನ್ ಖಾನ್ ಅಕ್ಟೋಬರ್ 9ರಂದು ಜಿನ್ನಾ ಕನ್ವೆನ್ಶನ್ ಸೆಂಟರ್ನಲ್ಲಿ ನಡೆದ ಇನ್ಸಾಫ್ ಲಾಯರ್ಸ್ ಫಾರಂನ ಸಭೆಯಲ್ಲಿ ಭಾಗವಹಿಸಿದ್ದರು. ಇನ್ಸಾಫ್ ಲಾಯರ್ಸ್ ಫಾರಂ ಎಂಬುದು ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಕಾನೂನು ಘಟಕವಾಗಿದೆ. ಇದರ ಸಾರ್ವಜನಿಕ ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ಸಾರ್ವಜನಿಕ ಹಣವನ್ನು ದುರಪಯೋಗ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ನೋಟಿಸ್ ಜಾರಿಗೊಳಿಸಿರುವಂಥದ್ದು.
ಪಂಜಾಬ್ ಸರ್ಕಾರದ ವಿರುದ್ಧ ಸಲ್ಲಿಕೆಯಾಗಿರುವ ಕೇಸ್ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಖ್ವಾಝಿ ಫಯೇಝ್ ಇಸಾ, ಪ್ರಧಾನ ಮಂತ್ರಿ ಇಡೀ ದೇಶಕ್ಕೆ ಹೊರತು ಒಂದು ನಿಶ್ಚಿತ ಗುಂಪಿಗಲ್ಲ. ಯಾಕೆ ಅವರು ರಾಜ್ಯದ ಸಂಪನ್ಮೂಲಗಳನ್ನು ದುರುಪಯೋಗ ಮಾಡ್ತಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರದ ಕಟ್ಟಡ, ಸ್ಥಳವನ್ನು ಉಪಯೋಗಿಸಿರುವುದು ಸರಿಯೇ ಎಂದು ಪ್ರಶ್ನಿಸಿದ್ದರೆಂದು ದ ಡಾನ್ ವರದಿಮಾಡಿದೆ.
ಇದನ್ನೂ ಓದಿ: Web Exclusive| ‘ಭಾನುವಾರ ಮಾರುಕಟ್ಟೆ’ ನನೆಗುದಿಗೆ
ಇದಕ್ಕೆ ಪೂರಕವಾಗಿ ಚೀಫ್ ಜಸ್ಟೀಸ್ ಗುಲ್ಜಾರ್ ಅಹ್ಮದ್ ಅವರು ಈ ಕೇಸ್ ವಿಚಾರಣೆಗೆ ನ್ಯಾಯಪೀಠವನ್ನು ರಚಿಸಲಿದ್ದಾರೆ. ಕನ್ವೆನ್ಶನ್ ಸೆಂಟರ್ಗೂ ನೋಟಿಸ್ ಜಾರಿಯಾಗಿದ್ದು, ಸಭೆಯ ಹಾಲ್ ಬಾಡಿಗೆ ಮತ್ತು ಇತರೆ ಖರ್ಚು ವೆಚ್ಚಗಳನ್ನು ಭರಿಸಿರುವವರು ಯಾರೆಂಬ ಮಾಹಿತಿ ಒದಗಿಸುವಂತೆ ಸೂಚಿಸಿದೆ. ಇದೇ ರೀತಿ, ಪಂಜಾಬ್ ಪ್ರಾಂತ್ಯದ ಅಡ್ವೋಕೇಟ್ ಜನರಲ್ ಮತ್ತು ಸಂಬಂಧಿತ ಸಚಿವಾಲಯಗಳ ಮುಖ್ಯಸ್ಥರಿಗೆ ನೋಟಿಸ್ ಜಾರಿಯಾಗಿದೆ. (ಏಜೆನ್ಸೀಸ್)