

ಚೆನ್ನೈ: ಅಜಿತ್ ಅಭಿನಯದ 'ತುನಿವು' ಎಂಬ ಹೊಸ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈ ಚಿತ್ರವು 2023ರ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗುವುದಾಗಿ ಚಿತ್ರತಂಡದವರು ಘೋಷಿಸಿದ್ದಾರೆ. ಇಷ್ಟಾದರೆ, ದೊಡ್ಡ ಸುದ್ದಿಯೇನಲ್ಲ. ವಿಶೇಷವೆಂದರೆ, ಸಂಕ್ರಾಂತಿಗೆ ವಿಜಯ್ ಅಭಿನಯದ 'ವಾರಿಸು' ಚಿತ್ರ ಸಹ ಬಿಡುಗಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಮೆಗಾ ಕ್ಲ್ಯಾಶ್ ಉಂಟಾಗಲಿದೆ.
ವಿಜಯ್ ಅಭಿನಯದ 'ವಾರಿಸು' ಚಿತ್ರದ ಬಿಡುಗಡೆ ಮುಂದಿನ ವರ್ಷದ ಸಂಕ್ರಾಂತಿ ಸಂದರ್ಭದಲ್ಲಿ ಆಗಲಿದೆ ಎಂದು ಆ ಚಿತ್ರತಂಡ ಮೊದಲೇ ಘೋಷಿಸಿತ್ತು. ಈಗ ಅಜಿತ್ ಅಭಿನಯದ 'ತುನಿವು' ಚಿತ್ರ ಸಹ ಅಂದೇ ಬಿಡುಗಡೆಯಾಗುತ್ತಿರುವುದು ಬಾಕ್ಸ್-ಆಫೀಸ್ನಲ್ಲಿ ದೊಡ್ಡ ಪೈಪೋಟಿ ಏರ್ಪಡಲಿದೆ.
ಸುಮಾರು ಎಂಟು ವರ್ಷಗಳ ಹಿಂದೆ ಇದೇ ಆಗಿತ್ತು. ಆಗ ಸಂಕ್ರಾಂತಿ ಹಬ್ಬದ ಪ್ರಯುಕ್ತ, ವಿಜಯ್ ಅಭಿನಯದ 'ಜಿಲ್ಲಾ' ಮತ್ತು ಅಜಿತ್ ಅಭಿನಯದ 'ವೀರಂ' ಚಿತ್ರಗಳು ಬಿಡುಗಡೆಯಾಗಿದ್ದವು. ಈ ಪೈಕಿ, 'ವೀರಂ' ಚಿತ್ರವು ಸೂಪರ್ ಹಿಟ್ ಆಗಿತ್ತು. ಈಗ ಎಂಟು ವರ್ಷಗಳ ನಂತರ ಮತ್ತೊಮ್ಮೆ ವಿಜಯ್ ಮತ್ತು ಅಜಿತ್ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಪೈಕಿ ಯಾವ ಚಿತ್ರ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇದು ತಮಿಳಿನ ಸುದ್ದಿಯಾದರೆ, ತೆಲುಗಿನಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವುದಕ್ಕೆ ದೊಡ್ಡ ಪೈಪೋಟಿ ಏರ್ಪಟಿದೆ. ಪ್ರಭಾಸ್ ಅಭಿನಯದ 'ಆದಿಪುರುಷ್', ಚಿರಂಜೀವಿ ಅಭಿನಯದ 'ವಾಲ್ಟರ್ ವೀರಯ್ಯ' ಮತ್ತು ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಚಿತ್ರಗಳು ಬಿಡುಗಡೆಯಾಗುತ್ತಿದೆ. 'ವಾರಿಸು' ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವುದರಿಂದ, ಅದು ಸಹ ಕಣದಲ್ಲಿದೆ.