

ಮುಂಬೈ: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯಿಸಲಿರುವ 'ಬ್ರಹ್ಮಾಸ್ತ್ರ'ದ ಮುಂದುವರೆದ ಭಾಗದಲ್ಲಿ ಯಶ್ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಶುಕ್ರವಾರ ಕೇಳಿಬಂದಿತ್ತು. ಆದರೆ, ಇದೊಂದು ಸುಳ್ಳುಸುದ್ದಿ, ಯಶ್ ಅವರನ್ನು ಸಂಪರ್ಕಿಸಿಯೇ ಇಲ್ಲ ಎಂದು ಆ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ.
ಬಾಲಿವುಡ್ನಿಂದ ಇತ್ತೀಚಿನ ದಿನಗಳಲ್ಲಿ ಯಶ್ಗೆ ಎರಡು ಆಫರ್ಗಳು ಬಂದಿದ್ದು, ಅದರಲ್ಲಿ 'ಬ್ರಹ್ಮಾಸ್ತ್ರ 2' ಚಿತ್ರವು ಒಂದಾದರೆ, ಇನ್ನೊಂದು ರಾಕೇಶ್ ಓಂಪ್ರಕಾಶ್ ಮೆಹ್ರಾ ಅಭಿನಯದ 'ಕರ್ಣ' ಇನ್ನೊಂದು ... ಈ ಎರಡೂ ಚಿತ್ರಗಳಲ್ಲಿ ನಟಿಸುವುದಕ್ಕೆ ಯಶ್ಗೆ ಆಫರ್ ಹೋಗಿದ್ದು, ಈ ಪೈಕಿ ಯಶ್ ಯಾವ ಚಿತ್ರವನ್ನು ಒಪ್ಪುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.
'ಬ್ರಹ್ಮಾಸ್ತ್ರ' ಚಿತ್ರದ ಅಂತ್ಯದಲ್ಲಿ ದೇವ್ ಎನ್ನುವ ಪಾತ್ರ ಬರಲಿದ್ದು, ಅದು ಮುಂದುವರೆದ ಭಾಗದಲ್ಲಿ ಇನ್ನಷ್ಟು ಮಹತ್ವ ಪಡೆಯಲಿದೆ. ಮೊದಲಿಗೆ, ಈ ಪಾತ್ರಕ್ಕಾಗಿ ಹೃತಿಕ್ ರೋಶನ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾತಿತ್ತು. ಆದರೆ, ಇತ್ತೀಚೆಗೆ, ಆ ಚಿತ್ರದಲ್ಲಿ ನಟಿಸುವಂತೆ ಯಶ್ಗೆ ಕೇಳಲಾಗಿದೆ ಮತ್ತು ಯಶ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಆದರೆ, ಈ ಸುದ್ದಿ ಶುದ್ಧ ಸುಳ್ಳು ಎಂದು ಆ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ದೇವ್ ಪಾತ್ರಕ್ಕೆ ಸಂಪರ್ಕ ಮಾಡುವುದಿರಲಿ, ಯಾರು ಮಾಡಿದರೆ ಚೆನ್ನ ಎಂದು ಸಹ ಯೋಚಿಸಿಲ್ಲ. ಈ ತರಹದ ಸುಳ್ಳುಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ' ಎಂದು ಹೇಳಿದ್ದಾರೆ. 'ಬ್ರಹ್ಮಾಸ್ತ್ರ 2' ಚಿತ್ರದಲ್ಲಿ ಯಶ್ ನಟಿಸಬಹುದು ಎಂದು ಖುಷಿಯಾಗಿದ್ದ ಯಶ್ ಅವರ ಅಭಿಮಾನಿಗಳಿಗೆ ಇದರಿಂದ ಆಗಿರುವ ಬೇಸರ ಅಷ್ಟಿಷ್ಟಲ್ಲ.
'ಕೆಜಿಎಫ್ 2' ಚಿತ್ರ ಬಿಡುಗಡೆಯಾಗಿ ಆರು ತಿಂಗಳುಗಳೇ ಕಳೆದಿವೆ. ಈ ಆರು ತಿಂಗಳಲ್ಲಿ ಯಶ್ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಆದರೆ, ಸದ್ಯಕ್ಕೆ ಉತ್ತರ ಮಾತ್ರ ಸಿಗುತ್ತಿಲ್ಲ. ಈಗಾಗಲೇ ಶಂಕರ್, ನರ್ತನ್ ಸೇರಿದಂತೆ ಕೆಲವು ದಕ್ಷಿಣದ ಜನಪ್ರಿಯ ನಿರ್ದೇಶಕರು ಯಶ್ ಜತೆಗೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಆದರೆ, ಯಾವುದೂ ಇದುವರೆಗೂ ಅಂತಿಮ್ಮವಾಗಿಲ್ಲ. ಬಹುಶಃ ಜನವರಿಯಲ್ಲಿ, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಾದರೂ ಯಶ್ ಹೊಸ ಚಿತ್ರವನ್ನು ಘೋಷಿಸುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಇದೆ.