ಇದು ಅದ್ಭುತ ಲೋಕದ ಅವತಾರ: ವಿಜಯವಾಣಿ ಸಿನಿಮಾ ವಿಮರ್ಶೆ

Review
Published on

ಚಿತ್ರ: ಅವತಾರ್ 2 - ದಿ ವೇ ಆಫ್ ವಾಟರ್

ನಿರ್ದೇಶಕ: ಜೇಮ್ಸ್​ ಕ್ಯಾಮರಾನ್

ನಿರ್ಮಾಣ: ಜೇಮ್ಸ್​ ಕ್ಯಾಮರಾನ್ ಮತ್ತು ಜಾನ್ ಲೆಂಡೌ

ತಾರಾಗಣ: ಸ್ಯಾಮ್ ವರ್ದಿಂಗ್ಟನ್, ಜೋ ಸಲ್ಡಾನಾ, ಸಿಗರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕ್ಲಿಫ್ ಕರ್ಟಿಸ್, ಜೊಯೆಲ್ ಡೇವಿಡ್ ಮೂರ್ ಮುಂತಾದವರು.

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

ಹದಿಮೂರು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ನಿರ್ದೇಶಕ ಜೇಮ್್ಸ ಕ್ಯಾಮರಾನ್ ಮತ್ತೊಮ್ಮೆ, ಮತ್ತೊಂದು ‘ಅವತಾರ್’ ಸೃಷ್ಟಿಸಿದ್ದಾರೆ. ಹಾಗಾದರೆ ಇಷ್ಟು ತಡವಾಗಿದ್ದಕ್ಕೂ ತೆರೆಯ ಮೇಲೆ ಮ್ಯಾಜಿಕ್ ಸೃಷ್ಟಿಯಾಗಿದೆಯಾ ಎಂಬ ಯೋಚನೆಯೊಂದಿಗೆ ಥಿಯೇಟರ್ ಒಳಗೆ ಹೋದರೆ, ಅಲ್ಲಿ ಮಾಂತ್ರಿಕಲೋಕವೇ ತೆರೆದುಕೊಳ್ಳುತ್ತದೆ. ಅದು ಬರೋಬ್ಬರಿ 192 ನಿಮಿಷಗಳ ಅದ್ಭುತ ಪಯಣ. ಕಂಡು, ಕೇಳರಿಯದ ಹೊಸ ಪ್ರಪಂಚದ ಅನಾವರಣ.

ಮೊದಲ ಭಾಗದಲ್ಲಿ ಭೂಮಿಯ ಆಯಸ್ಸು ಮುಗಿಯುತ್ತಾ ಬಂದಿದ್ದು, ಮನುಕುಲ ಜೀವಿಸಲು ಯೋಗ್ಯವಾದ ಹೊಸ ಗ್ರಹ ಹುಡುಕಿಕೊಂಡು ಹೋಗುವ ವಿಜ್ಞಾನಿಗಳಿಗೆ ಪೆಂಡೋರಾ ಎಂಬ ಚಂದ್ರ ಸಿಗುತ್ತದೆ. ಅಲ್ಲಿನ ಮೂಲ ನಿವಾಸಿಗಳೇ ಈ ಅವತಾರ್​ಗಳು. ಮನುಷ್ಯನಾಗಿ ಹೋಗಿ ಅವತಾರ್​ಗಳಂತೆ ರೂಪ ಪಡೆಯುವ ಜೇಕ್ ಸಲ್ಲಿ (ಸ್ಯಾಮ್ ವರ್ದಿಂಗ್ಟನ್), ಅವರೊಳಗೊಬ್ಬನಾಗಿ ಅವತಾರ್​ಗಳ ರಕ್ಷಣೆಗೆ ನಿಲ್ಲುತ್ತಾನೆ. ಅವರ ನಾಯಕನಾಗುತ್ತಾನೆ. ಆದರೆ, ಮನುಷ್ಯರು ಹಠವಾದಿಗಳು. ಹೇಗಾದರೂ ಮಾಡಿ ಅವತಾರ್​ಗಳನ್ನು ಮಟ್ಟ ಹಾಕಿ, ಪೆಂಡೋರಾಗೆ ಶಿಫ್ಟ್ ಆಗಲೇಬೇಕೆಂದು ಪಣತೊಟ್ಟು, ಯುದ್ಧ ಸಾರುತ್ತಾರೆ. ಅಲ್ಲಿನ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಾರೆ. ಪ್ರಾಣಿ, ಪಕ್ಷಿ, ಜಲಚರಗಳನ್ನು ಬೇಟೆಯಾಡುತ್ತಾರೆ. ಜೇಕ್ ಸಲ್ಲಿ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾರೆ. ಆಗ ನಾವಿ ಕುಲದ ನಾಯಕನಾಗಿದ್ದರೂ ಜೇಕ್, ತನ್ನ ಕುಟುಂಬದೊಂದಿಗೆ ಆ ಜಾಗವನ್ನು ತೊರೆಯುತ್ತಾನೆ. ಅರಣ್ಯ ಕುಲದವನಾಗಿದ್ದರೂ, ಸಮುದ್ರದಲ್ಲಿ ವಾಸಿಸುವ ಮತ್ತೊಂದು ಅವತಾರ್ ಕುಲದ ಬಳಿ ಆಶ್ರಯ ಕೋರುತ್ತಾನೆ. ಮುಂದೆ? ಸಮುದ್ರಲೋಕದ ಅನಾವರಣ. ಮತ್ತೊಮ್ಮೆ ಸಂಘರ್ಷ. ಸಿನಿಮಾ ನೋಡುತ್ತಾ ಪ್ರೇಕ್ಷಕರೂ ಹೊಸ ಪ್ರಪಂಚದಲ್ಲಿ ಕಳೆದು ಹೋಗುವ ಅನುಭವ...

ಮೊದಲ ಚಿತ್ರದಲ್ಲಿ ಮಾನವೀಯ ಮೌಲ್ಯಗಳ ಕುರಿತು ಬೆಳಕು ಚೆಲ್ಲಿದ್ದ ನಿರ್ದೇಶಕ ಜೇಮ್್ಸ ಕ್ಯಾಮರಾನ್, ‘ದಿ ವೇ ಆಫ್ ವಾಟರ್’ನಲ್ಲಿ ಕುಟುಂಬದ ಪ್ರಾಮುಖ್ಯತೆ, ಸಂಬಂಧಗಳ ಗಟ್ಟಿತನದತ್ತ ಗಮನ ಹರಿಸಿದ್ದಾರೆ. ಇದೆಲ್ಲವನ್ನೂ ಮನುಷ್ಯರಿಂದ ಹೇಳಿಸುವ ಬದಲಾಗಿ ಹೊಸ ಲೋಕದ ನೀಲಿ ಜೀವಿಗಳಿಂದ ಹೇಳಿಸಿದ್ದಾರೆ. ಹೊಸ ಹೊಸ ಬಗೆಯ ಜಲಚರಗಳಿಗೆ ತೆರೆಯ ಮೇಲೆ ಜೀವ ತುಂಬಿದ್ದಾರೆ. ಹಾರಿಸಿದ್ದಾರೆ, ತೇಲಿಸಿದ್ದಾರೆ, ಮುಳುಗಿಸಿದ್ದಾರೆ, ಓಡಿಸಿದ್ದಾರೆ, ಆಡಿಸಿದ್ದಾರೆ, ಜೋಡಿಸಿದ್ದಾರೆ... ಕೊನೆಗೆ ಇದೆಲ್ಲಾ ಹೇಗೆ ಸಾಧ್ಯ ಎಂದು ಪ್ರೇಕ್ಷಕರು ಯೋಚಿಸುವಂತೆ ಮಾಡಿದ್ದಾರೆ.

‘ಅವತಾರ’ ಎಂದರೆ ಪುನರ್ಜನ್ಮ ಸೇರಿದಂತೆ ಹಲವು ಅರ್ಥಗಳಿವೆ. ಹಿಂದೂ ಪುರಾಣಗಳಿಂದ ಸ್ಪೂರ್ತಿ ಪಡೆದು ಈ ಶೀರ್ಷಿಕೆ ಇಟ್ಟಿದ್ದಾಗಿ ನಿರ್ದೇಶಕ ‘ಜೇಮ್್ಸ ಕ್ಯಾಮರಾನ್’ ಸಹ ಹೇಳಿಕೊಂಡಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಅವತಾರ್ 2’ನಲ್ಲಿ ಜೇಮ್್ಸ ‘ಅಮೃತ’ದ ದರ್ಶನ ಮಾಡಿಸಿದ್ದಾರೆ. ಕಥೆ ನಡೆಯುವುದು ಸಮುದ್ರದಲ್ಲಾದರೂ, ಇಲ್ಲಿ ವಿಷ್ಣು ಪುರಾಣದಂತೆ ಸುರ-ಅಸುರರ ನಡುವೆ ಸಮುದ್ರಮಂಥನ ನಡೆಯವುದಿಲ್ಲ. ಹೀಗೆ ಹಾಲಿವುಡ್ ಮಂದಿಯೂ ಭಾರತೀಯ ಪುರಾಣಗಳಿಂದ ಸ್ಪೂರ್ತಿ ಪಡೆದಿರುವುದು ವಿಶೇಷವೇ ಸರಿ. ಅದೇನೇ ಇರಲಿ, ಕ್ಯಾಮರಾನ್ ಸೃಷ್ಟಿಸಿರುವ ಈ ಮಾಂತ್ರಿಕ ಲೋಕವನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net