

ಬೆಂಗಳೂರು: ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ 42 ಸಾಧಕರಿಗೆ ವಿಆರ್ಎಲ್ ಸಮೂಹ ಸಂಸ್ಥೆಯ ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಚಾನಲ್ ವತಿಯಿಂದ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ವಿುಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಆರ್ಎಲ್ ಮೀಡಿಯಾ ಪ್ರೖೆವೇಟ್ ಲಿಮಿಟೆಡ್ ಅಧ್ಯಕ್ಷೆ ವಾಣಿ ಆನಂದ ಸಂಕೇಶ್ವರ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
‘ವಿಜಯರತ್ನ’ ಪ್ರಶಸ್ತಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತ ನಾಡಿದ ಡಾ. ಆನಂದ ಸಂಕೇಶ್ವರ, ವಿಆರ್ಎಲ್ ಮೀಡಿಯಾ ಪ್ರೖೆ. ಲಿ. ಸಂಸ್ಥೆಯ ಸಾಮಾಜಿಕ ಕಳಕಳಿ ಕಾರ್ಯಗಳ ಕುರಿತು ವಿವರಿಸಿದರು. ವಿಜಯವಾಣಿ ಪತ್ರಿಕೆ ಈ ಹತ್ತು ವರ್ಷಗಳ ಪಯಣದಲ್ಲಿ ವರ್ಷದ 365 ದಿನಗಳಲ್ಲಿ ಕನಿಷ್ಠ 150 ದಿನಕ್ಕಿಂತ ಹೆಚ್ಚು ಅವಧಿ ಹತ್ತೂ ಬ್ಯೂರೋಗಳಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ವಿದ್ಯಾರ್ಥಿಗಳು-ಯುವಜನ, ಮಹಿಳೆಯರು, ಶೋಷಿತರು, ಬಡವರಿಗೆ ಅನುಕೂಲವಾಗುವ ವಿವಿಧ ಅಭಿಯಾನ, ಮೇಳ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರ ಮುಂದುವರಿದ ಭಾಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದವರನ್ನು ಗುರುತಿಸಿ ವಿಜಯರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ ಎಂದರು.
‘ವಿಜಯವಾಣಿ ಮತ್ತು ದಿಗ್ವಿಜಯ ಚಾನಲ್ ಜನರಿಗೆ ಕೇವಲ ಸುದ್ದಿ ಕೊಡುವ ಕೆಲಸ ಮಾಡದೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿವೆ. ಮುಂದುವರಿದ ಭಾಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ, ಅವರಿಗೆ ವಿಜಯರತ್ನ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಮುಖೇನ ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹ ಕೆಲಸ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂದೇಶ ಕಳುಹಿಸಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಪುರಸ್ಕೃತರು ಕುಟುಂಬ ಸಮೇತರಾಗಿ ಹಾಜರಾಗಿದ್ದರು. ಜಾನಪದ ಗಾಯಕಿ ಸವಿತಕ್ಕ ತಂಡದಿಂದ ಗೀತೆ ಗಾಯನ, ಡಿಚ್ಚಿ ಗಿಲಿಗಿಲಿ ತಂಡದಿಂದ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.