

ಬೆಂಗಳೂರು: 'ಬಿಗ್ ಬಾಸ್ ಒಟಿಟಿ ಕನ್ನಡ'ದ ಮೊದಲ ಸೀಸನ್ಗೆ ಶನಿವಾರ ರಾತ್ರಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ರಾತ್ರಿ 7ಕ್ಕೆ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸ್ಪರ್ಧಿಗಳು ಒಬ್ಬೊಬ್ಬರೇ ಮನೆಗೆ ಪ್ರವೇಶ ಮಾಡುತ್ತಿದ್ದಾರೆ.
ಮೊದಲ ಹಂತವಾಗಿ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಸೋನು ಶ್ರೀನಿವಾಸ ಗೌಡ ಮತ್ತು ನಟ ರೂಪೇಶ್ ಶೆಟ್ಟಿ ಮನೆಗೆ ಎಂಟ್ರಿ ಕೊಟ್ಟಿದ್ದು, ನಂತರ ಮಿಕ್ಕ ಸ್ಪರ್ಧಿಗಳು ಒಬ್ಬೊಬ್ಬರೇ ಮನೆಗೆ ಎಂಟ್ರಿ ಕೊಡಲಿದ್ದಾರೆ.
ಒಟಿಟಿಯ ಮೊದಲ ಸೀಸನ್ನಲ್ಲಿ ಯುವಪೀಳಿಗೆಯನ್ನು ರೀಚ್ ಆಗುವ, ಸೋಷಿಯಲ್ ಮೀಡಿಯಾ ಬಗ್ಗೆ ಅರಿವಿರುವವರೇ ಇರಲಿದ್ದಾರೆ ಎಂದು ವಯಕಾಮ್ 18 ಕನ್ನಡ ಕ್ಲಸ್ಟರ್ ಹೆಡ್ ಆದ ಪರಮೇಶ್ವರ್ ಗುಂಡ್ಕಲ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರಂತೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯರಾದವರೇ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ.
ಮೂಲಗಳ ಪ್ರಕಾರ ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಸಾನಿಯಾ ಅಯ್ಯರ್, ಅರ್ಜುನ್ ರಮೇಶ್, ಪತ್ರಕರ್ತ ಸೋಮಣ್ಣ ಮಾಚಿಮಾಡ, ಸ್ಫೂರ್ತಿ ಗೌಡ, ಕಿರಣ್ ಯೋಗೇಶ್ವರ್, ಲೋಕೇಶ್, ಉದಯ್ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಈ 16 ಸದಸ್ಯರ ಪೈಕಿ ಒಬ್ಬರು ವಿಜೇತರಾಗುವುದಷ್ಟೇ ಅಲ್ಲದೆ, ಅಕ್ಟೋಬರ್ನಲ್ಲಿ ಕಲರ್ಸ್ ಕನ್ನಡದಲ್ಲಿ ನಡೆಯಲಿರುವ 'ಬಿಗ್ ಬಾಸ್'ನ 9ನೇ ಸೀಸನ್ನಲ್ಲೂ ಕೆಲವರು ಪಾಲ್ಗೊಳ್ಳಲಿರುವುದು ವಿಶೇಷ.