ವಿಚಿತ್ರ ಕಾಯಿಲೆಯಿಂದ ಸತ್ತಿದ್ದಾರೆ 61 ಮಂದಿ; ತನಿಖೆ ನಡೆಸಿ ಎಂದು ಕೋರಿಕೊಂಡ ಗ್ರಾಮಸ್ಥರು..

Disease
Published on

ಛತ್ತೀಸ್​ಗಢ: ನಮ್ಮ ಗ್ರಾಮದಲ್ಲಿ ಜನರು ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ಇದುವರೆಗೆ 61 ಮಂದಿ ಅದಕ್ಕೆ ಬಲಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಸಿ ಎಂಬುದಾಗಿ ಗ್ರಾಮಸ್ಥರು ಸಂಬಂಧಿತ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಛತ್ತೀಸ್​ಗಡದ ಸುಕ್ಮಾ ಜಿಲ್ಲೆಯ ರೆಗಡ್ಗಟ್ಟ ಗ್ರಾಮದಲ್ಲಿನ ಜನರು ಜಿಲ್ಲಾಡಳಿತಕ್ಕೆ ಈ ಕುರಿತಾಗಿ ಮನವಿ ಮಾಡಿಕೊಂಡಿದ್ದು, ಗ್ರಾಮಕ್ಕೆ ಕಳೆದ ವಾರ ತೆರಳಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಅಲ್ಲದೆ ಆ. 8ರಂದು ಗ್ರಾಮಕ್ಕೆ ಪರಿಣತರ ತಂಡವನ್ನು ಕಳಿಸಿಕೊಡಲಾಗುವುದು ಎಂಬ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದಾರೆ.

130 ಕುಟುಂಬಗಳ ಸುಮಾರು 1 ಸಾವಿರ ಮಂದಿ ಈ ಗ್ರಾಮದಲ್ಲಿದ್ದು, ಜು. 27ರಂದು ಜಿಲ್ಲಾಡಳಿತಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದರು. ಕೈ ಹಾಗೂ ಕಾಲುಗಳಲ್ಲಿ ಊತ ಕಾಣಿಸಿಕೊಂಡು ಜನರು ಸಾಯುತ್ತಿದ್ದಾರೆ. 2020ರಿಂದ ಹೀಗಾಗುತ್ತಿದ್ದು, ಇದುವರೆಗೆ ಈ ರೀತಿಯಲ್ಲಿ 61 ಜನರು ಸಾವಿಗೀಡಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಪ್ರಾಥಮಿಕ ವರದಿ ಪ್ರಕಾರ ಆ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಲ್ಲಿ 47 ಮಂದಿ ಸಾವಿಗೀಡಾಗಿದ್ದು, ಸ್ಥಳೀಯರು ಹೇಳಿರುವಂತೆ ಎಲ್ಲರೂ ಅದೇ ಕಾರಣಕ್ಕೆ ಸತ್ತಿಲ್ಲ. ಕೆಲವರ ದೇಹದಲ್ಲಿ ಊತ ಕಾಣಿಸಿಕೊಂಡಿದ್ದರೂ ಅದು ಬೇರೆ ಬೇರೆ ಕಾರಣಕ್ಕೆ ಇರಬಹುದು. ಇನ್ನು ಅಲ್ಲಿನ ಜಲಮೂಲಗಳಲ್ಲಿ ಫ್ಲೋರೈಡ್​ ಅಂಶ ಜಾಸ್ತಿ ಇರುವುದು, ಇನ್ನೊಂದು ಕಡೆ ಕಬ್ಬಿಣದ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ಅದಾಗ್ಯೂ ಜನರು ಯಾಕೆ ಸತ್ತಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ, ಆ. 8ರಂದು ಪರಿಣತರ ತಂಡ ಬಂದು ಪರಿಶೀಲಿಸಿ ವರದಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. -ಏಜೆನ್ಸೀಸ್

​https://www.vijayavani.net/dysp-and-police-inspector-transfer-order/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net