ನಟಿಸಲು ಒಂದು ರೂ. ಸಂಭಾವನೆ ಪಡೆದಿಲ್ಲ 'ಮಹಾರಾಜ'! ವಿಜಯ್ ಸೇತುಪತಿ ನಿರ್ಧಾರದ ಹಿಂದಿತ್ತಾ ಈ ಕಾರಣ?

ವಿಜಯವಾಣಿ - 2024-08-01T164858.134
Published on

ತಮಿಳುನಾಡು: ಜೂನ್​ 14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ತಮಿಳು ನಟ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾ ಇದೀಗ ಅಧಿಕೃತವಾಗಿ ಒಟಿಟಿ ಪ್ಲಾಟ್​ಫಾರ್ಮ್​ ನೆಟ್​ಫ್ಲಿಕ್ಸ್​ಗೂ ಎಂಟ್ರಿ ಕೊಟ್ಟಿದೆ. ಸೇತುಪತಿ ಅಭಿನಯದ 50ನೇ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಹೆಚ್ಚಿನ ಭರವಸೆ ಮೂಡಿಸದೇ ಹೋದರೂ ಒಟಿಟಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಂದಿಗೂ ಕೆಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಮಹಾರಾಜ ಚಿತ್ರದಲ್ಲಿ ಸೇತುಪತಿ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

'ಮಹಾರಾಜ' ಚಿತ್ರದ ಗೆಲುವಿನಲ್ಲಿ ನಟನೆ ಎಷ್ಟು ದೊಡ್ಡ ಪಾತ್ರವಹಿಸಿದೆಯೋ ಅಷ್ಟೇ ಪ್ರಮಾಣದಲ್ಲಿ ಪಾತ್ರ ವಹಿಸಿದ್ದು ಸಿನಿಮಾ ಕಥೆ. ಪ್ರೇಕ್ಷಕರನ್ನು ಕಡೆಯವರೆಗೂ ಹಿಡಿದಿಟ್ಟುಕೊಳ್ಳುವುದೇ ಕಥೆಯ ಜೀವಾಳ. ಎಂದಿನಂತೆ ವಿಜಯ್ ಸೇತುಪತಿ ಚಿತ್ರ ಅಂದರೆ ಅಲ್ಲಿ ಅಭಿನಯ ಅದ್ಭುತವಾಗಿರುತ್ತದೆ ಎಂಬುದು ಖಚಿತ. ಏಕಂದರೆ ಯಾವುದೇ ಪಾತ್ರ ಕೊಟ್ಟರು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಕ್ಕೆ ವಿಜಯ್​ ಹೆಸರುವಾಸಿ. ಇದೊಂದರಿಂದಲೇ ಅಪಾರ ಚಿತ್ರರಸಿಕರನ್ನು ಸಂಪಾದಿಸಿರುವ ನಟ, ಇದೀಗ ತಮಿಳು ಚಿತ್ರರಂಗದಲ್ಲಿ 'ಮಹಾರಾಜ'ನಾಗಿ ಮುಂದುವರೆಯುತ್ತಿದ್ದಾರೆ.

ಪ್ರೇಕ್ಷಕರಿಂದ ಸೈಎನಿಸಿಕೊಂಡಿರುವ ಮಹಾರಾಜ ಇಲ್ಲಿಯವರೆಗೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಲಾಭ ಗಳಿಸಿದೆ ಎಂದು ವರದಿಯಾಗಿದೆ. ಮಾಹಿತಿಯ ಪ್ರಕಾರ, ಚಿತ್ರದಲ್ಲಿ ನಟಿಸಲು ವಿಜಯ್ ಸೇತುಪತಿ ಒಂದು ರೂಪಾಯಿ ಹಣವನ್ನು ಸಂಭಾವನೆಯಾಗಿ ಪಡೆದಿಲ್ಲ ಎಂದು ಹೇಳಲಾಗಿದೆ. ನಿಥಿಲನ್ ಸ್ವಾಮಿನಾಥನ್ ನಿರ್ದೇಶಿಸಿದ ಚಿತ್ರ ನಿರ್ಮಾಣಗೊಂಡಿದ್ದು ಕೇವಲ 20 ಕೋಟಿ ರೂ. ಬಜೆಟ್​ನಲ್ಲಿ. ಇಷ್ಟೇ ಬಜೆಟ್​ನಲ್ಲಿ ಚಿತ್ರ ಮಾಡಬೇಕಿದ್ದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತು. ಇದನ್ನು ಅರ್ಥ ಮಾಡಿಕೊಂಡ ವಿಜಯ್​, ತಮಗೆ ಸಂಭಾವನೆ ಬೇಡವೆಂದು ಹೇಳಿರುವುದಾಗಿ ಸಿನಿ ಮೂಲಗಳು ತಿಳಿಸಿವೆ.

ಚಿತ್ರಕ್ಕೆ ವಿಜಯ್ ಸೇತುಪತಿ ಸಂಭಾವನೆ ಪಡೆಯದೆ ಇರಬಹುದು. ಆದರೆ, 'ಮಹಾರಾಜ'ನಿಗೆ ದೊರೆಯುವ ಲಾಭದಲ್ಲಿ ಪಾಲು ಪಡೆಯಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net