

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಹೆಬ್ರಿ ಹಾಗೂ ಕಾರ್ಕಳ ತಾಲೂಕು ವ್ಯಾಪ್ತಿಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಶಾಸಕ ವಿ.ಸುನೀಲ್ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು. ಕ್ಷೇತ್ರದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಭೂಕುಸಿತ, ಗುಡ್ಡ ಕುಸಿತ ಮತ್ತು ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಆ ಪರಿಸರದ ಕುಟುಂಬಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಗಳ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕಾರ್ಕಳ ಕ್ಷೇತ್ರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ಅಂಗಡಿಗಳ ಚಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕ್ರಮ ಕೈಗೊಳ್ಳಲು ಉಭಯ ತಹಸೀಲ್ದಾರರಿಗೆ ಆದೇಶಿಸಲಾಯಿತು. ಮಳೆ ನೀರಿನ ಹರಿವಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜತೆಗೆ ರಸ್ತೆಗಳ ಮೇಲೆ ಮಳೆ ನೀರು ಸಂಗ್ರಹಗೊಳ್ಳದಂತೆ ಕ್ರಮ ವಹಿಸುವಿಕೆ ಸಹಿತ ಅಗತ್ಯವಿರುವೆಡೆ ಕಾರ್ಯನಿರ್ವಹಿಸುವಂತೆ ಲೋಕೋಪಯೋಗಿ ಹಾಗೂ ಪಂಚಾಯತ್ರಾಜ್ ಇಲಾಖಾ ಅಧಿಕಾರಿಗಳಿಗೂ ತಿಳಿಸಲಾಯಿತು.
ಹೆದ್ದಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು. ಕ್ಷೇತ್ರದಲ್ಲಿ ಪ್ರಾಕೃತಿಕ ವಿಕೋಪಗಳು ಎದುರಿಸಲು ಎಲ್ಲ ಅಧಿಕಾರಿಗಳು ಸಿದ್ಧರಿರಬೇಕು ಎಂದು ಶಾಸಕರು ಸೂಚನೆ ನೀಡಿದರು. ಸಭೆಯಲ್ಲಿ ಉಭಯ ತಾಲೂಕುಗಳ ತಹಸೀಲ್ದಾರರು, ಅಧಿಕಾರಿಗಳು ಉಪಸ್ಥಿತರಿದ್ದರು.
ಮೆಸ್ಕಾಂ ಕಾರ್ಕಳ ವಿಭಾಗ ವ್ಯಾಪ್ತಿಯ ಕಾರ್ಕಳ, ನಿಟ್ಟೆ ಹಾಗೂ ಹೆಬ್ರಿ ಉಪವಿಭಾಗ ವ್ಯಾಪ್ತಿಗಳಲ್ಲಿ 735 ವಿದ್ಯುತ್ ಕಂಬಗಳು ತುಂಡಾಗಿದ್ದು, ಕೂಡಲೆ ದುರಸ್ತಿಪಡಿಸಿ ವಿದ್ಯುತ್ ಸಂಪರ್ಕಗಳನ್ನು ಮರು ಸ್ಥಾಪಿಸಲಾಗಿದೆ. ಅಡಚಣೆ ರಹಿತ ವಿದ್ಯುತ್ ಪೂರೈಕೆಗೆ ತಯಾರಿರುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರ್ಕಾರ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳನ್ನು ಭೂಕುಸಿತದ ವಲಯಗಳು ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಮಟ್ಟದ ಪಿಡಿಒಗಳು, ಗ್ರಾಮ ಆಡಳಿತ ಅಧಿಕಾರಿಗಳ ತುರ್ತು ಸಭೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಶಾಸಕ ಸುನೀಲ್ಕುಮಾರ್ ಸೂಚಿಸಿದರು.