

ಚೆನ್ನೈ: ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರವು ಕಳೆದ ವರ್ಷದ ಕೊನೆಯಲ್ಲೇ ಪ್ರಾರಂಭವಾಗಬೇಕಿತ್ತು. ಚಿತ್ರದ ಫಸ್ಟ್ಲುಕ್ ಟೀಸರ್ ಸಹ ಬಿಡುಗಡೆಯಾಗಿ, ಇನ್ನೇನು ಚಿತ್ರೀಕರಣ ಪ್ರಾರಂಭವಾಗುವಷ್ಟರಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಯಿತು.
ಇದೀಗ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿದೆ. ಕಮಲ್ ಹಾಸನ್ ಚುನಾವಣೆಗಳಲ್ಲಿ ಸೋತಿದ್ದೂ ಆಗಿದೆ. ಇದೀಗ ಅವರು ಅಭಿನಯಕ್ಕೆ ವಾಪಸ್ಸಾಗುತ್ತಿದ್ದಾರೆ. ಆಗ ನಿಂತಿದ್ದ ವಿಕ್ರಮ್ ಚಿತ್ರವನ್ನು ಪುನಃ ಪ್ರಾರಂಭಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ.
ಈ ಮಧ್ಯೆ, ಚಿತ್ರಕ್ಕೆ ದಕ್ಷಿಣ ಭಾರತದ ಸ್ಟಾರ್ ನಟರು, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ. ತಮಿಳಿನ ವಿಜಯ್ ಸೇತುಪತಿ ಮತ್ತು ಮಲಯಾಳಂ ನಟ ಫಹಾದ್ ಫಾಸಿಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾರಂತೆ. ಆದರೆ, ಅವರ ಪಾತ್ರವೇನು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಅವರಿಬ್ಬರ ಪಾತ್ರಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲವಾದರೂ, ಕಮಲ್ ಹಾಸನ್ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ವಿಕ್ರಮ್ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಸಹ ಅವರದ್ದೇ. ಇದಕ್ಕೂ ಮುನ್ನ, ವಿಜಯ್ ಅಭಿನಯದ ಮಾಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದರು ಲೋಕೇಶ್. ಚಿತ್ರ ಹಿಟ್ ಆಗಿತ್ತು. ಇದೀಗ, ಅವರು ಕಮಲ್ ಹಾಸನ್ ಅಭಿನಯದ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರವನ್ನು ಕಮಲ್ ಹಾಸನ್ ಅವರೇ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ.