94 ದಿನ ಮುಗಿಸಿದ್ದ ಬಿಗ್​ಬಾಸ್​ಗೆ ಸಡನ್​ ಬ್ರೇಕ್​! ಅಧಿಕಾರಿಗಳೇ ಬಂದು ಸೀಲ್​ ಮಾಡಿಬಿಟ್ಟರು!

bb
Published on

ಚೆನ್ನೈ: ಕರೊನಾ ಹಿನ್ನೆಲೆಯಲ್ಲಿ ಕನ್ನಡದ ಬಿಗ್​ಬಾಸ್​ ಸೀಸನ್​ 8 ಸ್ಥಗಿತವಾಗಿದೆ. ಸ್ಪರ್ಧಾಳುಗಳನ್ನೆಲ್ಲರನ್ನೂ ದೊಡ್ಮನೆಯಿಂದ ಹೊರಗೆ ಕರೆದು ಅವರವರ ಮನೆಗೆ ಕಳುಹಿಸಿಕೊಡಲಾಗಿದೆ. ಇದೀಗ ಮತ್ತೊಂದು ಭಾಷೆಯ ಬಿಗ್​ಬಾಸ್​ ಕೂಡ ಅರ್ಧದಲ್ಲೇ ಸ್ಥಗಿತಗೊಂಡಿದೆ. 94 ದಿನ ಕಳೆದಿದ್ದ ಶೋಗೆ ಅಧಿಕಾರಿಗಳೇ ಬಂದು ಬೀಗ ಜಡಿದಿದ್ದಾರೆ.

ಮಲಯಾಳಂನ ಬಿಗ್​ಬಾಸ್​ ಸೀಸನ್​ 2 ಕಾರ್ಯಕ್ರಮ 94 ದಿನಗಳನ್ನು ಮುಗಿಸಿತ್ತು. ಆದರೆ ಅಷ್ಟರಲ್ಲಾಗಲೇ ಪರದೆ ಹಿಂದೆ ಕೆಲಸ ಮಾಡುತ್ತಿದ್ದ ಆರು ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಮೂಲಗಳ ಪ್ರಕಾರ, ಮನೆಗೂ ಸೋಂಕು ಹಬ್ಬಿದೆ ಎನ್ನಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಯಾವುದೇ ಚಿತ್ರೀಕರಣಕ್ಕೆ ಅವಕಾಶ ಇಲ್ಲವಾದರೂ, ಅದನ್ನು ಉಲ್ಲಂಘಿಸಿ ಚಿತ್ರೀಕರಣ ನಡೆಸಿದ್ದಕ್ಕೆ ತಮಿಳುನಾಡು ಅಧಿಕಾರಿಗಳು ಬಿಗ್​ಬಾಸ್​ ಮನೆಯನ್ನು ಸೀಲ್​ ಮಾಡಿದ್ದಾರೆ. ಚೆನ್ನೈನ ಇವಿಪಿ ಫಿಲಂ ಸಿಟಿಯಲ್ಲಿ ನಡೆಸುತ್ತಿದ್ದ ಶೂಟಿಂಗ್​ ಅನ್ನು ಈ ರೀತಿಯಲ್ಲಿ ನಿಲ್ಲಿಸಲಾಗಿದೆ. ಅಲ್ಲಿದ್ದ ಸ್ಪರ್ಧಾಳುಗಳನ್ನು ಹೋಟೆಲ್​ ಒಂದಕ್ಕೆ ಸ್ಥಳಾಂತರಗೊಳಿಸಿರುವುದಾಗಿ ಹೇಳಲಾಗಿದೆ.

ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಮಿಳುನಾಡು ವಿಪತ್ತು ನಿರ್ವಹಣಾ ಕಾಯ್ದೆಯ ಅನುಸಾರ ಕಾರ್ಯಕ್ರಮದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಂದು ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿಯೂ ಹೇಳಲಾಗಿದೆ.

ಮಲಯಾಳಂ ನಟ ಮೋಹನ್​ಲಾಲ್​ ನಡೆಸಿಕೊಡುತ್ತಿರುವ ಬಿಗ್​ಬಾಸ್​ ಅನ್ನು ಫೆಬ್ರವರಿ 14ರಂದು ಆರಂಭಿಸಲಾಗಿತ್ತು. ಇನ್ನೇನು ಫೈನಲ್​ ನಡೆಸಬೇಕು ಎನ್ನುವಷ್ಟರಲ್ಲಿ ಕರೊನಾ ಸೋಂಕಿನ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಎರಡು ವಾರಗಳ ಕಾಲ ಮುಂದುವರಿಸಲಾಗಿತ್ತು. ಈಗ ಸ್ಥಗಿತಗೊಂಡಿರುವ ಕಾರ್ಯಕ್ರಮ ಮತ್ತೆ ಪುನರಾರಂಭವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net