

ಹೈದರಾಬಾದ್: 'ಲೈಗರ್' ಚಿತ್ರದ ಬಗ್ಗೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು ವಿಜಯ್ ದೇವರಕೊಂಡ. ಆ ಚಿತ್ರವು ತನ್ನನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿಸಬಹುದು ಎಂದು ಅವರು ನಿರೀಕ್ಷಿಸಿದ್ದರು. ಆದರೆ, ಆ ಚಿತ್ರವು ಅವರ ಜೀವನದ ಅತ್ಯಂತ ದೊಡ್ಡ ಫ್ಲಾಪ್ ಆಯಿತು. 'ಲೈಗರ್' ನಂತರ ಅವರ ಮುಂದಿನ ನಡೆ ಏನಾಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಅದಕ್ಕೀಗ ತೆರೆ ಬಿದ್ದಿದೆ.
ವಿಜಯ್ ದೇವರಕೊಂಡ ನಾಯಕನಾಗಿ ಅಭಿನಯಿಸುತ್ತಿರುವ 12ನೇ ಚಿತ್ರವನ್ನು 'ಜೆರ್ಸಿ' ನಿರ್ದೇಶಿಸಿದ್ದ ಗೌತಮ್ ತಿನ್ನನೂರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಸದ್ಯಕ್ಕೆ ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಇದು ವಿಜಯ್ ಅಭಿನಯದ 12ನೇ ಚಿತ್ರವಾಗಿರುವುದರಿಂದ ಚಿತ್ರಕ್ಕೆ ವಿ12 ಎಂದು ಕರೆಯಲಾಗುತ್ತಿದೆ.
ಈ ಚಿತ್ರದ ಕಥೆ ಏನು ಎಂದು ಚಿತ್ರತಂಡದವರು ಬಿಟ್ಟುಕೊಟ್ಟಿಲ್ಲ. ಇದೊಂದು ಪೀರಿಯಡ್ ಚಿತ್ರವಾಗಿದ್ದು, ವಿಜಯ್ ದೇವರಕೊಂಡ ಇದರಲ್ಲಿ ಒಬ್ಬ ಸ್ಪೈ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಪೋಸ್ಟರ್ನಲ್ಲಿ ನಾಯಕನ ಮುಖವನ್ನು ಬಟ್ಟೆಯೊಂದರಿಂದ ಮುಚ್ಚಲಾಗಿದೆ. ‘I don’t know where I belong, to tell you whom I betrayed’ ಎಂದು ಬರೆಯಲಾಗಿದ್ದು, ಕೆಳಗೆ ಅನಾಮಧೇಯ ಪತ್ತೇದಾರಿ ಎಂದು ಬರೆಯಲಾಗಿದೆ.
'ವಿi12' ಚಿತ್ರವಲ್ಲದೆ, 'ಖುಷಿ' ಎಂಬ ಇನ್ನೊಂದು ಚಿತ್ರದಲ್ಲೂ ವಿಜಯ್ ದೇವರಕೊಂಡ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ಸಮಂತಾ ನಟಿಸುತ್ತಿದ್ದಾರೆ.