

ಮುಂಬೈ: ಬಾಲಿವುಡ್ ನಟ ಸಂಜಯ್ ದತ್, ಕ್ಯಾನ್ಸರ್ ಗೆದ್ದು ಬಂದ ವಿಷಯ ಗೊತ್ತೇ ಇದೆ. ಎರಡು ವರ್ಷಗಳ ಹಿಂದೆ ಅವರಿಗೆ ಕ್ಯಾನ್ಸರ್ ಆಗಿತ್ತು ಎಂಬ ಸುದ್ದಿ ಬಂದಿತ್ತು. ಆ ಸಂದರ್ಭದಲ್ಲಿ ಅವರು ಕನ್ನಡದ 'ಕೆಜಿಎಫ್ 2' ಚಿತ್ರದಲ್ಲಿ ನಟಿಸಬೇಕಿತ್ತು. ಸಂಜು ಬಾಬುಗೆ ಕ್ಯಾನ್ಸರ್ ಇದೆ ಎಂಬ ವಿಷಯ ಸುದ್ದಿಯಾದಾಗ, ಅವರು ಪುನಃ ಮೊದಲಿನಂತೆ ನಟಿಸುವುದಕ್ಕೆ ಸಾಧ್ಯವಿಲ್ಲವೇನೋ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಅವೆಲ್ಲವನ್ನೂ ಸುಳ್ಳು ಮಾಡಿ, ಅವರು ಕ್ಯಾನ್ಸರ್ ಗೆದ್ದು ಬಂದಿದ್ದಷ್ಟೇ ಅಲ್ಲ, ಆ ಚಿತ್ರದಲ್ಲೂ ನಟಿಸಿದರು.
ತಮಗೆ ಕ್ಯಾನ್ಸರ್ ಇದೆ ಎಂಬ ವಿಷಯ ಮೊದಲು ಗೊತ್ತಾದಾಗ, ಸಂಜಯ್ ದತ್ ಮೊದಲ ರಿಯಾಕ್ಷನ್ ಹೇಗಿತ್ತು ಎಂಬ ಪ್ರಶ್ನೆ ಸಹಜವೇ, ಈ ವಿಷಯವನ್ನು ಅವರು ಸ್ವತಃ ಈಗ ಹೇಳಿಕೊಂಡಿದ್ದಾರೆ. 'ನನಗೆ ಭಯಂಕರ ಬೆನ್ನು ನೋವು ಇತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದೆ. ಒಂದು ದಿನ ಉಸಿರಾಡುವುದಕ್ಕೂ ಕಷ್ಟವಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆ ಸಂದರ್ಭದಲ್ಲಿ ನನ್ನ ಹೆಂಡತಿ, ಸಹೋದರಿಯರು ಯಾರೂ ಇರಲಿಲ್ಲ. ಆಗ ಒಬ್ಬ ವ್ಯಕ್ತಿ ಬಂದು ನನಗೆ ಕ್ಯಾನ್ಸರ್ ಇರುವ ವಿಷಯವನ್ನು ಹೇಳಿದರು' ಎಂದು ನೆನಪಿಸಿಕೊಂಡಿದ್ದಾರೆ ಸಂಜಯ್ ದತ್.
'ಕ್ಯಾನ್ಸರ್ ಇರುವ ವಿಷಯ ಗೊತ್ತಾದಾಗ ನನ್ನ ಇಡೀ ಜೀವನ ಒಂದು ಕ್ಷಣ ನನ್ನ ಕಣ್ಣೆದುರು ಬಂದು ಹೋಯಿತು. ಇದಕ್ಕೂ ಮೊದಲು ನನ್ನ ತಾಯಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ನನ್ನ ಹೆಂಡತಿ (ರಿಚಾ ಶರ್ಮ) ಬ್ರೈನ್ ಕ್ಯಾನ್ಸರ್ನಿಂದ ಇಲ್ಲವಾದರು. ಹಾಗಾಗಿ, ಯಾವುದೇ ಕಾರಣಕ್ಕೂ ನನ್ನ ಚಿಕಿತ್ಸೆ ಬೇಡ, ನಾನು ಸಾಯಬೇಕು ಎಂದು ಬರೆದಿದ್ದರೆ, ಹಾಗೆಯೇ ಸಾಯುತ್ತೇನೆ. ನನಗೆ ಯಾವುದೇ ಚಿಕಿತ್ಸೆ ಬೇಡ ಎಂದು ಹೇಳಿದ್ದೆ' ಎಂದಿದ್ದಾರೆ ಸಂಜಯ್ ದತ್.
ಸಂಜಯ್ಗೆ ಕ್ಯಾನ್ಸರ್ ಇರುವ ವಿಷಯ ಗೊತ್ತಾಗುತ್ತಿದ್ದಂತೆ ಅವರ ಪತ್ನಿ ಮಾನ್ಯತಾ, ದುಬೈನಿಂದ ಬಂದರಂತೆ. ಸಹೋದರಿಯರಾದ ಪ್ರಿಯಾ ಮತ್ತು ನಮ್ರತಾ ಸಹ ಕೂಡಿಕೊಂಡರಂತೆ. ಆ ನಂತರ ಅವರು ಸಂಜಯ್ ಜತೆಗಿದ್ದುದರಿಂದ, ಅವರಿಗೆ ಮತ್ತಷ್ಟು ಬಲ ಬಂದಿದೆ. ಅದರಿಂದಲೇ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ, ಗೆದ್ದು ಬಂದಿದ್ದಾರೆ.
ಅಂದಹಾಗೆ, ಪ್ರೇಮ್ ನಿರ್ದೇಶನದ 'ಕೆಡಿ - ದಿ ಡೆವಿಲ್' ಚಿತ್ರದಲ್ಲಿ ನಟಿಸುವುದಕ್ಕೆ ಸಂಜಯ್ ದತ್ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅದರ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ಸುದ್ದಿ ಇದೆ.