ಸಾಲು ಸಾಲು ಫ್ಲಾಪ್​ನಿಂದ ಕಂಗೆಟ್ಟಿದ್ದ ವಿಜಯ್​ಗೆ 'ಕಿಂಗ್​ಡಮ್​' ಸಾಥ್​! ನಿಟ್ಟುಸಿರು ಬಿಟ್ಟ ವಿಜಯ್​ ದೇವರಕೊಂಡ | Vijay Devarakonda

ವಿಜಯವಾಣಿ - 2025-08-03T160252.635
Published on

Vijay Devarakonda: ತೆಲುಗು ಅಂಗಳದಲ್ಲಿ ತೆರೆಕಂಡ 'ಅರ್ಜುನ್​ ರೆಡ್ಡಿ', ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಕಂಡಿತ್ತು. ಈ ಚಿತ್ರದ ಮೂಲಕ ಸ್ಟಾರ್​ ನಟನಾಗಿ ಗುರುತಿಸಿಕೊಂಡ ವಿಜಯ್ ದೇವರಕೊಂಡ, ಟಾಲಿವುಡ್​ನಲ್ಲಿ ಸಾಕಷ್ಟು ಆಫರ್​ಗಳನ್ನು ಸ್ವೀಕರಿಸಿದರು. ಆದರೆ, 2022ರಿಂದ ಇಂದಿನವರೆಗೂ ನಟನ ಸಿನಿ ಕರಿಯರ್​ನಲ್ಲಿ ಕಂಡಿದ್ದೆಲ್ಲ ಸೋಲು​! ಬ್ಯಾಕ್ ಟು ಬ್ಯಾಕ್ ಫ್ಲಾಪ್​ ಅನ್ನೇ ಕಂಡ ವಿಜಯ್, ಹಿಟ್​ ಚಿತ್ರಗಳನ್ನು ಕೊಡಲಿಲ್ಲ. ಆದ್ರೆ, ಇತ್ತೀಚೆಗೆ ಬಿಡುಗಡೆಗೊಂಡಿರುವ 'ಕಿಂಗ್​ಡಮ್'​ ನಟನಿಗೆ ಕೊಂಚ ರಿಲೀಫ್​ ನೀಡಿದೆ.

ಗೌತಮ್​ ತಿನ್ನೂರಿ ನಿರ್ದೇಶಿಸಿರುವ ಹಾಗೂ ವಿಜಯ್ ದೇವರಕೊಂಡ ಅಭಿನಯಿಸಿರುವ 'ಕಿಂಗ್​ಡಮ್​', ಇದೇ ಜುಲೈ 31ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡಿತು. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ರಿಲೀಸ್ ಆಗಿರುವ ನಟನ ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಲಭಿಸುತ್ತಿವೆ. ಭರ್ಜರಿ ಓಪನಿಂಗ್ ಪಡೆಯದಿದ್ದರೂ ದಿನ ಕಳೆದಂತೆ ಬಾಕ್ಸ್ ಆಫೀಸ್​ ಗಳಿಕೆಯಲ್ಲಿ ಒಳ್ಳೆಯ ಬೆಳವಣಿಗೆಯನ್ನೇ ನೋಡುತ್ತಿದೆ.

ಬಿಡುಗಡೆಗೊಂಡ ಮೂರು ದಿನಗಳಲ್ಲಿ ಚಿತ್ರವು ಜಾಗತಿಕವಾಗಿ 67 ಕೋಟಿ ರೂ. ಗಳಿಸಿದೆ. ವಾರಾಂತ್ಯದಲ್ಲಿ ಜನ ತುಂಬಿದ್ದು, ಸೋಮವಾರ ಮತ್ತು ನಂತರದ ದಿನಗಳ ಲೆಕ್ಕಾಚಾರದ ಮೇಲೆ ಚಿತ್ರತಂಡದ ಚಿತ್ತ ಮೂಡಿದೆ. ಪ್ರಸ್ತುತ, ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುವ ಸಿನಿಮಾ, ಎಷ್ಟು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎಂಬುದರ ಮೇಲೆ ಸಿನಿಮಾದ ಯಶಸ್ಸು ಅಡಗಿದೆ.

2022ರಿಂದ ಫ್ಲಾಪ್​ ದೆಸೆ

ಅರ್ಜುನ್ ರೆಡ್ಡಿ ಯಶಸ್ಸನ್ನು ನೋಡಿದ ವಿಜಯ್ ದೇವರಕೊಂಡ, 2022ರಲ್ಲಿ ತೆರೆಗೆ ಬಂದ 'ಲೈಗರ್'​ ಚಿತ್ರದಿಂದ ಫ್ಲಾಪ್​ ಹಾದಿಯನ್ನು ಹಿಡಿದರು. ಬಾಕ್ಸ್​ ಆಫೀಸ್​ನಲ್ಲಿ ಹೀನಾಯ ಸೋಲು ಅನುಭವಿಸಿದ ಈ ಚಿತ್ರವು, ಪ್ರೇಕ್ಷಕರಿಂದಲೂ ನೀರಸ ಪ್ರತಿಕ್ರಿಯೆ ಗಳಿಸಿತು. ಇದಾದ ಬಳಿಕ ರಿಲೀಸ್​ ಆದ 'ಖುಷಿ' ಮತ್ತು 'ಫ್ಯಾಮಿಲಿ ಸ್ಟಾರ್'​ ಕೂಡ ಅಂದುಕೊಂಡಂತೆ ಕಮಾಲ್ ಮಾಡಲಿಲ್ಲ. ಸರಣಿ ಫ್ಲಾಪ್​ನಿಂದ ಕಂಗೆಟ್ಟಿದ್ದ ವಿಜಯ್​, ಇದೀಗ 'ಕಿಂಗ್​ಡಮ್'​ನಿಂದ ಕೊಂಚ ನಿರಾಳರಾಗಿದ್ದಾರೆ ಎಂದೇ ಹೇಳಬಹುದು.

ಚಿತ್ರದಲ್ಲಿ ನಟಿ ಭಾಗ್ಯಶ್ರೀ ಬೋರ್ಸೆ ಮತ್ತು ವಿಜಯ್ ದೇವರಕೊಂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಸತ್ಯ ದೇವ್, ವೆಂಕಟೇಶ್, ಅಯ್ಯಪ್ಪ ಶರ್ಮಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ನಿರ್ಮಿಸಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net