

Weight Loss: ತೂಕ ಇಳಿಸಿಕೊಳ್ಳುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಯುವಕರು ಮಾತ್ರವಲ್ಲ, 50 ವರ್ಷ ವಯಸ್ಸು ದಾಟಿದವರು ಕೂಡ ತೂಕ ಇಳಿಕೆಗೆ ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಇದಕ್ಕೋಸ್ಕರ ಜಿಮ್ಗೆ ಹೋಗುವುದು, ಮನೆಯಲ್ಲೇ ಒಂದಷ್ಟು ವರ್ಕ್ಔಟ್, ಜಾಗಿಂಗ್, ವಾಕಿಂಗ್ ಮಾಡುವ ಅಭ್ಯಾಸವನ್ನೂ ರೂಢಿಸಿಕೊಂಡಿದ್ದಾರೆ. ಕೇವಲ ವ್ಯಾಯಾಮವೊಂದೇ ಸಾಕಾಗುವುದಿಲ್ಲ! ಇದರೊಟ್ಟಿಗೆ ಸರಿಯಾದ ಆಹಾರ ಕ್ರಮ ಸಹ ತೂಕ ಇಳಿಸಲು ಹೆಚ್ಚು ಸಹಕಾರಿ ಎಂಬ ಅಚ್ಚರಿ ಸಂಗತಿಯನ್ನು ಇಂದು ಬಹುತೇಕರು ಮರೆತಿದ್ದಾರೆ.
ನಮ್ಮ ಮನೆಗಳಲ್ಲಿ ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲೇ ಸಾಕಷ್ಟು ಪ್ರಯೋಜನಕಾರಿ ಅಂಶಗಳು ಅಡಗಿವೆ. ಆದರೆ, ಈ ಬಗ್ಗೆ ನಾವು ಹೆಚ್ಚು ತಿಳಿಯೋದಿಲ್ಲ. ಅರಿಯುವ ಪ್ರಯತ್ನಕ್ಕೂ ಮುಂದಾಗುವುದಿಲ್ಲ. ಯಾರೋ ಹೇಳಿದರೂ, ಇನ್ಯಾರೋ ಸಲಹೆ ನೀಡಿದರೆಂದು ಅದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳದೆ ಅನುಸರಿಸಲು ಪ್ರಾರಂಭಿಸುವ ಜನರೇ ನಮ್ಮಲ್ಲಿ ಹೆಚ್ಚು. ಯಾವುದೇ ವಿಷಯವನ್ನು ಸರಿಯಾಗಿ, ಪರಿಶೀಲಿಸಿ ಅಳವಡಿಸಿಕೊಳ್ಳುವುದು ಉತ್ತಮ. ತೂಕ ಇಳಿಕೆಗೆ ಅತ್ಯುತ್ತಮ ಮನೆಮದ್ದು ಆಗಿರುವ ಬೆಳ್ಳುಳ್ಳಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಇದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಔಷಧಿ ಗುಣಗಳಿವೆ. ಭಕ್ಷ್ಯಗಳಿಗೆ ರುಚಿಯನ್ನು ಒದಗಿಸುವುದಲ್ಲದೇ, ಅನೇಕ ಆರೋಗ್ಯ ಪ್ರಯೋಜನಗಳನ್ನು ತುಂಬಿಕೊಂಡಿದೆ. ಮುಖ್ಯವಾಗಿ, ಇದು ತೂಕ ಇಳಿಸುವಲ್ಲಿ ಚಮತ್ಕಾರಿಯಾಗಿದೆ. ಅದೂ ಕೂಡ ನೈಸರ್ಗಿಕ ರೀತಿಯಲ್ಲಿ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ. ಈ ರೀತಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ, ನೀವು ಜಿಮ್, ವ್ಯಾಯಾಮ ಅಥವಾ ಯೋಗಕ್ಕೆ ಹೋಗದೆಯೇ ದೇಹದಲ್ಲಿರುವ ಕೊಬ್ಬನ್ನು ನಿಧಾನವಾಗಿ ಮನೆಯಲ್ಲೇ ಕರಗಿಸಬಹುದು. ಇದು ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ.
1. ಚಯಾಪಚಯ ಹೆಚ್ಚಳ: ಬೆಳ್ಳುಳ್ಳಿಯಲ್ಲಿರುವ ಸಕ್ರಿಯ ಸಂಯುಕ್ತವಾದ ಆಲಿಸಿನ್ ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆ ಹೆಚ್ಚಾದಾಗ, ದೇಹವು ಕ್ಯಾಲೊರಿಗಳನ್ನು ಸುಡಲು ಪ್ರಾರಂಭಿಸುತ್ತದೆ. ಇದು ಕೊಬ್ಬಿನ ಸಂಗ್ರಹವನ್ನು ಕಡಿತಗೊಳಿಸಲು ಸಹಕಾರಿ.
2. ಕೊಬ್ಬಿನ ಸಂಗ್ರಹ ನಿಯಂತ್ರಣ: ಬೆಳ್ಳುಳ್ಳಿ ಕೆಲವು ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಕೊಬ್ಬಿನ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಭಾಗದಲ್ಲಿ ಕೂಡಿರುವ ಬೊಜ್ಜನ್ನು ಇಳಿಸುವಲ್ಲಿ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ.
3. ಹಸಿವು ನಿಯಂತ್ರಣ: ಬೆಳ್ಳುಳ್ಳಿ ತಿನ್ನುವುದರಿಂದ ಅನಗತ್ಯ ಹಸಿವನ್ನು ನಿಯಂತ್ರಿಸುತ್ತದೆ. ಇದು ಅತಿಯಾಗಿ ತಿನ್ನುವ ಅಭ್ಯಾಸವನ್ನು ಕಡಿತಗೊಳಿಸುತ್ತದೆ. ಇದು ನೈಸರ್ಗಿಕ ತೂಕ ನಷ್ಟಕ್ಕೆ ಉತ್ತಮ.
4. ನಿರ್ವಿಶೀಕರಣ ಗುಣಲಕ್ಷಣ: ಬೆಳ್ಳುಳ್ಳಿ ನೈಸರ್ಗಿಕ ನಿರ್ವಿಶೀಕರಣ ಏಜೆಂಟ್. ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ದೇಹವು ಆರೋಗ್ಯದಿಂದ ಕೂಡಿರುತ್ತದೆ. ಇದು ತೂಕ ಇಳಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
5. ಸಕ್ಕರೆ ಮಟ್ಟ ನಿಯಂತ್ರಣ: ಬೆಳ್ಳುಳ್ಳಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಸಹಕಾರಿ.
1. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಅಥವಾ 3 ಬೆಳ್ಳುಳ್ಳಿ ಎಸಳನ್ನು ನೀರಿನೊಂದಿಗೆ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
2. ಬೆಳ್ಳುಳ್ಳಿ ಮತ್ತು ನಿಂಬೆ ರಸ: ಬೆಳ್ಳುಳ್ಳಿ ಎಸಳುಗಳನ್ನು ಬಿಸಿ ನೀರಿನಲ್ಲಿ ಕುದಿಸಿ, ಆ ನೀರಿನೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.