ರೈಲ್ವೆ ಹಳಿ ಮೇಲೆಯೇ ಕಾರು ಚಾಲನೆ: ಯುವತಿಯ ಹುಚ್ಚಾಟಕ್ಕೆ ತಡವಾದ ರೈಲು, ಕಾರಣ ಕೇಳಿದ್ರೆ ದಂಗಾಗ್ತೀರಾ! Railway Tracks

Railway Tracks
Published on

Railway Tracks : ಇದು ಸಾಮಾಜಿಕ ಜಾಲತಾಣಗಳ ಯುಗ. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವಕರು ಮೊಬೈಲ್​ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ.

ಇದಿಷ್ಟು ಒಂದು ಭಾಗವಾದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ರೀಲ್ಟ್​, ಶಾರ್ಟ್ಸ್​ ಎಂಬ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್​ ಉನ್ಮಾದದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಅಪಾಯವನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ. ರೈಲು ಹಳಿಗಳಲ್ಲಿ, ರಸ್ತೆಯಲ್ಲಿ ಹೀಗೆ ಅಪಾಯದ ಅಂಚಿನಲ್ಲಿ ನಿಂತು ವಿಡಿಯೋ ಮಾಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ರೀಲ್ಸ್​ ಹುಚ್ಚಿನಿಂದಾಗಿ ರೈಲು ಹಳಿಗಳ ಮೇಲೆಯೇ ಕಾರು ಚಲಾಯಿಸಿ, ಸುದ್ದಿಯಾಗಿದ್ದಾಳೆ. ಯುವತಿ ಮಾಡಿದ ಎಡವಟ್ಟಿನಿಂದಾಗಿ ರೈಲು 45 ನಿಮಿಷಿಗಳ ಕಾಲ ವಿಳಂಬವಾಗಿದೆ.

ಈ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಾಗುಲಪಲ್ಲಿ-ಶಂಕರಪಲ್ಲಿ ಮಾರ್ಗದಲ್ಲಿ ನಡೆದಿದೆ. ಯುವತಿಯೊಬ್ಬಳು ಹಳಿಗಳ ಮೇಲೆ ಕಾರು ಚಲಾಯಿಸುವುದನ್ನು ರೈಲ್ವೆ ಸಿಬ್ಬಂದಿ ಗಮನಿಸಿದಾಗ ತಡೆಯಲು ಪ್ರಯತ್ನಿಸಿದರು. ಆದರೆ, ಕಾರು ನಿಲ್ಲಿಸದೆ ಯುವತಿ ಅಲ್ಲಿಂದ ಹೊರಟುಹೋದಳು. ಬಳಿಕ ನಾಗುಲಪಲ್ಲಿಯಲ್ಲಿ ಸ್ಥಳೀಯರು ಗಮನಿಸಿ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ, ಯುವತಿ ಕಾರನ್ನು ನಿಲ್ಲಿಸದೆ ಮುಂದೆ ಹೋಗಲು ಪ್ರಯತ್ನಿಸಿದಳು. ಆದರೆ, ಬಹಳ ಕಷ್ಟಪಟ್ಟು, ಕಾರನ್ನು ತಡೆದರು. ಈ ವೇಳೆ ಚಾಕು ತೋರಿಸಿ ಬೆದರಿಸಿದಳು.

ಅದೇ ಮಾರ್ಗದಲ್ಲಿ ಬರುತ್ತಿದ್ದ ರೈಲಿನ ಲೋಕೋ ಪೈಲಟ್ ಕಾರನ್ನು ಗಮನಿಸಿ ರೈಲನ್ನು ನಿಲ್ಲಿಸಿದರು. ನಂತರ, ಸ್ಥಳೀಯರು ಯುವತಿಯನ್ನು ಬಹಳ ಕಷ್ಟಪಟ್ಟು ಕಾರಿನಿಂದ ಹೊರಗೆಳೆದರು. ಈ ವೇಳೆ ಸ್ಥಳದಲ್ಲಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಯುವತಿಯನ್ನು ವಶಕ್ಕೆ ಪಡೆದರು. ಬಾಲಕಿಯ ದುರ್ವರ್ತನೆಯಿಂದಾಗಿ ಹಲವಾರು ರೈಲುಗಳ ಸಂಚಾರಕ್ಕೆ ಅಡ್ಡಿಯಾಯಿತು. ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುವ ರೈಲುಗಳನ್ನು ಅಧಿಕಾರಿಗಳು ನಿಲ್ಲಿಸಿದರು. ಶಂಕರಪಲ್ಲಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಕೇವಲ ರೀಲ್ಸ್​ಗಾಗಿ ಯುವತಿ ರೈಲ್ವೆ ಟ್ರ್ಯಾಕ್​ ಮೇಲೆ ಕಾರನ್ನು ಚಲಾಯಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net