ಅಯತೊಲ್ಲಾ ಖಮೇನಿ ಎಲ್ಲಿ? ಸುಪ್ರೀಂ ಲೀಡರ್​ ಕಣ್ಮರೆ, ಇರಾನ್​ ಜನರಲ್ಲಿ ಹೆಚ್ಚಿದ ಆತಂಕ! ಅಧಿಕಾರಿಗಳು ಹೇಳಿದ್ದಿಷ್ಟು... Ayatollah Ali Khamenei

Ayatollah Ali Khamenei
Published on

Ayatollah Ali Khamenei : ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಸಂಘರ್ಷದ ಸಮಯದಲ್ಲಿ, ಅಮೆರಿಕ ಕೂಡ ಇರಾನ್ ಮೇಲೆ ಹಠಾತ್ ದಾಳಿ ನಡೆಸಿತು. ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂಬ ಭಯವೂ ಇತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆಗಳೊಂದಿಗೆ 12 ದಿನಗಳ ಬಳಿಕ ಯುದ್ಧದ ವಾತಾವರಣ ಶಾಂತವಾಗಿದೆ. ಆದಾಗ್ಯೂ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕಾಣೆಯಾಗಿರುವುದು ಇರಾನ್​ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇಸ್ರೇಲ್-ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕಣ್ಮರೆಯಾಗಿದ್ದಾರೆ. ಒಂದು ವಾರದಿಂದ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಯುದ್ಧದ ಸಮಯದಲ್ಲಿಯೂ ಖಮೇನಿಯ ಧ್ವನಿ ಕೇಳಲಿಲ್ಲ. ಇದು ಇರಾನಿನ ನಾಯಕರು ಮತ್ತು ಜನರನ್ನು ಚಿಂತೆಗೀಡು ಮಾಡಿದೆ. ಅಲ್ಲದೆ, ದೇಶಾದ್ಯಂತ ತೀವ್ರವಾದ ಊಹಾಪೋಹಗಳು ಹರಿದಾಡುತ್ತಿವೆ. ಏನಾಗಿದೆ ಖಮೇನಿಗೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಯುದ್ಧ ಪ್ರಾರಂಭವಾದ ನಂತರ ಸುಪ್ರೀಂ ನಾಯಕ ಖಮೇನಿಯನ್ನು ರಹಸ್ಯ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಯಿತು ಎಂಬ ಸುದ್ದಿ ಹೊರಬಿದ್ದಿತು. ಯಾರೂ ಅವರನ್ನು ಗುರಿಯಾಗಿಸಿಕೊಳ್ಳದಂತೆ ತಡೆಯಲು ಅವರನ್ನು ಎಲೆಕ್ಟ್ರಾನಿಕ್ ಸಂವಹನದಿಂದ ದೂರವಿಡಲಾಗಿದೆ ಎಂದು ಆಪ್ತ ಅಧಿಕಾರಿಗಳು ತಿಳಿಸಿದರು. ಆದರೆ, ಯುದ್ಧ ನಿಂತರೂ ಖಮೇನಿ ಕಾಣಿಸಿಕೊಳ್ಳದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅಂದಹಾಗೆ, ಇರಾನ್ ಸರ್ಕಾರದ ಉನ್ನತ ವ್ಯಕ್ತಿಗಳು ಸಹ ಖಮೇನಿ ಅವರೊಂದಿಗೆ ನೇರ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಮಂಗಳವಾರ, ಪ್ರೈಮ್-ಟೈಮ್ ಇರಾನ್ ಸ್ಟೇಟ್ ಟೆಲಿವಿಷನ್ ಶೋ ನಿರೂಪಕರೊಬ್ಬರು ಖಮೇನಿ ಅವರ ಕಚೇರಿಯ ಹಿರಿಯ ಅಧಿಕಾರಿ ಮೆಹದಿ ಫಜೇಲಿ ಅವರನ್ನು ಸುಪ್ರೀಂ ಲೀಡರ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಖಮೇನಿ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಜನರು ತುಂಬಾ ಚಿಂತಿತರಾಗಿದ್ದಾರೆ. ಅವರು ಹೇಗಿದ್ದಾರೆಂದು ನಮಗೆ ಹೇಳಬಲ್ಲಿರಾ? ಎಂದು ಅವರು ಕೇಳಿದರು. ಆದರೆ, ಫಜೇಲಿ ಆ ಪ್ರಶ್ನೆಯನ್ನು ಬದಿಗಿಟ್ಟು ನಾವೆಲ್ಲರೂ ಪ್ರಾರ್ಥಿಸಬೇಕು ಎಂದು ಹೇಳಿದರು. ಸುಪ್ರೀಂ ಲೀಡರ್ ಅವರನ್ನು ರಕ್ಷಿಸಲು ಕೆಲಸ ಮಾಡುತ್ತಿರುವವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಹೀಗಾಗಿ ಇರಾನ್​ ಜನರಲ್ಲಿ ಖಮೇನಿ ಇದೀಗ ಪ್ರಶ್ನೆಯಾಗಿ ಉಳಿದಿದ್ದಾರೆ.

ಇರಾನ್ ಅನ್ನು ದಶಕಗಳಿಂದ ರಾಜನಂತೆ ಆಳಿದ 86 ವರ್ಷದ ಖಮೇನಿಯನ್ನು ಇಸ್ರೇಲಿ ಗುಪ್ತಚರ ಸಂಸ್ಥೆಗಳು ಹುಡುಕುತ್ತಿವೆ. ಅವರಿಗೆ ವಿದೇಶಗಳಲ್ಲಿ ಮಾತ್ರವಲ್ಲದೆ ಸ್ವಂತ ದೇಶದಲ್ಲಿಯೂ ಶತ್ರುಗಳಿದ್ದಾರೆ. ಖಮೇನಿ ಪತ್ತೆಯಾದರೆ, ಅವರನ್ನು ಜೀವಂತವಾಗಿ ಸೆರೆಹಿಡಿದು ಕಾನೂನಿನ ಪ್ರಕಾರ ಶಿಕ್ಷಿಸಲಾಗುತ್ತದೆ ಅಥವಾ ಸ್ಥಳದಲ್ಲೇ ಕೊಲ್ಲಲಾಗುತ್ತದೆ ಎಂದು ಪಾಶ್ಚಿಮಾತ್ಯ ಸುದ್ದಿ ವಾಹಿನಿಗಳು ಭವಿಷ್ಯ ನುಡಿಯುತ್ತಿವೆ. ಖಮೇನಿ ಅವರು ಜೀವಂತವಾಗಿ ಇರುವವರೆಗೂ ಇರಾನ್‌ನಲ್ಲಿ ತಮ್ಮ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ಮತ್ತು ಅಮೆರಿಕ ನಿರ್ಧರಿಸಿವೆ ಎಂದು ತೋರುತ್ತದೆ. ಖಮೇನಿ, ಭೌತಿಕವಾಗಿ ಹೋದರೆ ಮಾತ್ರ ಈ ಯುದ್ಧ ಕೊನೆಗೊಳ್ಳುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಹ ಸ್ಪಷ್ಟಪಡಿಸಿದ್ದಾರೆ. ಖಮೇನಿ ಒಬ್ಬ ಆಧುನಿಕ ಹಿಟ್ಲರ್. ಆತ ಜೀವಂತವಾಗಿರಲು ಸಾಧ್ಯವಿಲ್ಲ ಎಂಬ ಸಂಚಲನಾತ್ಮಕ ಹೇಳಿಕೆಗಳನ್ನು ಸಹ ನೀಡಿದ್ದಾರೆ. ಈ ಎಲ್ಲ ಕಾರಣಗಳಿಂದ ಇರಾನ್​ ಜನರಲ್ಲಿ ಆತಂಕ ಮನೆ ಮಾಡಿದೆ. ಖಮೇನಿ ಪತ್ತೆಯಾಗದಿದ್ದರೆ ಈ ಆತಂಕ ಇನ್ನಷ್ಟು ಹೆಚ್ಚಾಗಲಿದೆ.

ಈ ತಿಂಗಳ 12 ರಂದು, ಇಸ್ರೇಲಿ ಸೈನ್ಯವು ಇರಾನ್ ಮೇಲೆ ಹಠಾತ್ ದಾಳಿ ನಡೆಸಿತು. ಅದಾದ ತಕ್ಷಣ, ಖಮೇನಿ ತಲೆಮರೆಸಿಕೊಂಡರು. ಅಂದಿನಿಂದ ಅಜ್ಞಾತ ಪ್ರದೇಶದಲ್ಲಿ ಹೆಚ್ಚು ಸುರಕ್ಷಿತವಾದ ಬಂಕರ್‌ನಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಇರಾನಿನ ಅಧಿಕಾರಿಗಳು ಹೇಳುತ್ತಾರೆ. ಅವರಿಗೆ ಉತ್ತಮ ತರಬೇತಿ ಪಡೆದ ಅಂಗರಕ್ಷಕರು ರಕ್ಷಣೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಖಮೇನಿ ನಿಖರವಾಗಿ ಎಲ್ಲಿದ್ದಾರೆಂದು ಯಾರಿಗೂ ತಿಳಿಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಸ್ರೇಲಿ ಗುಪ್ತಚರ ಸಂಸ್ಥೆಗಳು ಅವರನ್ನು ಹುಡುಕಲು ಸಾಧ್ಯವಾಗದಂತೆ ಇರಾನ್ ಸರ್ಕಾರ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದೆ. ಖಮೇನಿಯನ್ನು ಬಿಗಿಯಾಗಿ ಕಾವಲು ಕಾಯಲಾಗುತ್ತಿದೆ. ಉನ್ನತ ಮಟ್ಟದ ಭದ್ರತಾ ಪಡೆ ಅವರನ್ನು ನಿರಂತರವಾಗಿ ಕಾವಲು ಕಾಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಮೇನಿಯ ಜೀವಕ್ಕೆ ಯಾರೂ ಹಾನಿ ಮಾಡದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಖಮೇನಿ ಸಾವಿಗೆ ಹೆದರುವ ವ್ಯಕ್ತಿಯಲ್ಲ ಮತ್ತು ಇರಾನ್‌ನ ಭವಿಷ್ಯಕ್ಕಾಗಿ ಅವರನ್ನು ಜೀವಂತವಾಗಿರಿಸುವುದು ಅವಶ್ಯಕ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net