

Telangana Teen : ಅಪ್ರಾಪ್ತ ಹುಡುಗಿಯೊಬ್ಬಳು ತನ್ನ ಪ್ರಿಯಕರ ಹಾಗೂ ಆತನ ಸಹೋದರನ ಜತೆ ಸೇರಿಕೊಂಡು, ಸಂಚು ಮಾಡಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ಮೇಡ್ಚಲ್ ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾದ ತಾಯಿಯ ಹೆಸರು ಅಂಜಲಿ. ಆಕೆಯ ಮಗಳಿಗೆ ಕೇವಲ 16 ವರ್ಷ ವಯಸ್ಸು. 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಮಗಳು ಪ್ರೀತಿ ಮಾಡುತ್ತಿದ್ದ ವಿಚಾರ ತಾಯಿಗೆ ತಿಳಿದಿತ್ತು. ಹೀಗಾಗಿ, ಮಗಳನ್ನು ಚೆನ್ನಾಗಿ ಬೈದು ಬುದ್ಧಿ ಹೇಳಿದ್ದಳು. ಇದನ್ನು ಸಹಿಸದ ಮಗಳು ಪ್ರಿಯಕರ ಪಗಿಲ್ಲ ಶಿವ (19) ಮತ್ತು ಆತನ ಸಹೋದರ ಪಗಿಲ್ಲ ಯಶವಂತ್ (18) ಜತೆ ಸೇರಿ ಅಂಜಲಿಯನ್ನು ಕೊಲೆ ಮಾಡಿದ್ದಾರೆ.
ಮೂವರು ಸೇರಿ ಅಂಜಲಿಯನ್ನು ಕತ್ತು ಹಿಸುಕಿ, ಕಬ್ಬಿಣದ ಸರಳುಗಳಿಂದ ತಲೆಗೆ ಹೊಡೆದು ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಾಲನಗರ ಡಿಸಿಪಿ ಸುರೇಶ್ ಕುಮಾರ್, ತನ್ನ ತಾಯಿಯ ಕಿರುಕುಳ ಮತ್ತು ದೌರ್ಜನ್ಯದಿಂದಾಗಿ ಬಾಲಕಿ ಈ ರೀತಿ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಅಪ್ರಾಪ್ತೆ, ಅಂಜಲಿಯ ಮೊದಲ ಮದುವೆಯ ಮಗಳು. ತನ್ನ ನಿರ್ಲಕ್ಷಿಸಿ ತಂಗಿಗೆ ಹೆಚ್ಚಿನ ಕಾಳಜಿ ಮತ್ತು ಗಮನ ನೀಡಲಾಗುತ್ತಿದೆ ಎಂದು ಭಾವಿಸಿದ್ದಳು. ಅಲ್ಲದೆ, ಆಕೆ ಮನೆಯಲ್ಲಿ ನಿರಂತರ ಚಿತ್ರಹಿಂಸೆ ಅನುಭವಿಸುತ್ತಿದ್ದಳು ಮತ್ತು 7ನೇ ತರಗತಿಯಲ್ಲಿದ್ದಾಗ ತನ್ನ ತಾಯಿಯ ವಿರುದ್ಧ ಪೊಲೀಸ್ ದೂರು ಸಹ ದಾಖಲಿಸಿದ್ದಳು. ಈ ವೇಳೆ ಆಕೆಯನ್ನು ತಾತ್ಕಾಲಿಕವಾಗಿ ಆಶ್ರಯ ಗೃಹದಲ್ಲಿ ಇರಿಸಲಾಗಿತ್ತು.
ಇನ್ನು ಆರಂಭದಲ್ಲಿ, ಶಿವನೊಂದಿಗೆ ಮಗಳ ಪ್ರೇಮ ಸಂಬಂಧವನ್ನು ಅಂಜಲಿ ಒಪ್ಪಿಕೊಂಡಿದ್ದಳು. ಅಲ್ಲದೆ, ಕೆಲವು ದಿನಗಳ ಕಾಲ ತಮ್ಮ ಮನೆಯಲ್ಲಿಯೇ ಇರಲು ಶಿವನಿಗೆ ಅವಕಾಶ ಸಹ ನೀಡಿದ್ದಳು. ಆದರೆ, ದಿನಗಳು ಕಳೆದಂತೆ ಸನ್ನಿವೇಶಗಳು ತಿರುವು ಪಡೆದುಕೊಂಡವು. ಅಂಜಲಿ, ಶಿವನಿಂದ ಹಣಕ್ಕಾಗಿ ಬೇಡಿಕೆ ಇಡಲು ಮತ್ತು ಅವನನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದಳು. ತಾಯಿ ಮತ್ತು ಮಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ತಾಯಿ ನಡೆಯಿಂದ ಬೇಸತ್ತಿದ್ದ ಮಗಳು, ಪ್ರಿಯಕರನೊಂದಿಗೆ ಸೇರಿ ಸಂಚು ಮಾಡಿ ಕೊಲೆ ಮಾಡಿದ್ದಾಳೆಂದು ಡಿಸಿಪಿ ಸುರೇಶ್ ಕುಮಾರ್ ಹೇಳಿದ್ದಾರೆ.
ಇನ್ನು ಈ ಅಪರಾಧವು ಹೈದರಾಬಾದ್ನ ಉಪನಗರವಾದ ಜೀಡಿಮೆಟ್ಲಾದಲ್ಲಿ ನಡೆದಿದೆ. ಆದರೂ, ಇದು ಮೆಡ್ಚಲ್ ಜಿಲ್ಲೆಗೆ ಸೇರಿರುವುದರಿಂದ ಅಲ್ಲಿಯೇ ಪ್ರಕರಣ ದಾಖಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ಕಾರಣವಾದ ಸಂಪೂರ್ಣ ಉದ್ದೇಶ ಮತ್ತು ಘಟನೆಗಳನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಹೆಚ್ಚಿನ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್)