

ನವದೆಹಲಿ : 'ವಿಂಕ್ ಗರ್ಲ್' ಎಂದೇ ಖ್ಯಾತರಾದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರ್ತಾರೆ. ಇನ್ಸ್ಟಾಗ್ರಾಂನಲ್ಲಿ ಸುಮಾರು 7 ಮಿಲಿಯನ್ ಫಾಲೋವರ್ಸ್ ಇರುವ ಪ್ರಿಯಾರ ಹೊಸ ಪೋಸ್ಟಂತೂ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.
ರಷ್ಯಾ ಪ್ರವಾಸದ ಮೇಲಿರುವ ಪ್ರಿಯಾ, ಕ್ರೀಂ ಬಣ್ಣದ ಸೀರೆ ಉಟ್ಟುಕೊಂಡು ಮಲಯಾಳಿ ಹಾಡೊಂದಕ್ಕೆ, ರಸ್ತೆಯ ಮೇಲೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅವರ ಈ ಆಕರ್ಷಕ ಪ್ರದರ್ಶನದ ವಿಡಿಯೋವನ್ನು ನಿನ್ನೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಈ ಪೋಸ್ಟಿಗೆ ಅದಾಗಲೇ 3 ಲಕ್ಷಕ್ಕೂ ಹೆಚ್ಚು ಲೈಕುಗಳ ಸುರಿಮಳೆಯಾಗಿದೆ.
ತಮ್ಮ ಈ ಪೋಸ್ಟ್ಗೆ, "ನನ್ನೊಳಗಿರುವ ಮಲಯಾಳಿಯನ್ನು ಹೊರತರಲು ಯಾವುದೋ ಒಂದು ನೆಪ" ಎಂದು ಶೀರ್ಷಿಕೆ ನೀಡಿದ್ದಾರೆ, ಪ್ರಿಯಾ! 2018 ರಲ್ಲಿ ತಮ್ಮ ಕಣ್ಣು ಹೊಡೆಯುವ ವಿಶಿಷ್ಟ ವಿಡಿಯೋ ತುಣುಕಿನಿಂದ ಪ್ರಖ್ಯಾತರಾಗಿದ್ದ ಪ್ರಿಯಾ, ಮಲಯಾಳಿ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುವುದರೊಂದಿಗೆ, ರೂಪದರ್ಶಿ ಮತ್ತು ಗಾಯಕಿ ಕೂಡ ಆಗಿದ್ದಾರೆ. (ಏಜೆನ್ಸೀಸ್)