VIDEO | ಡ್ರಗ್ಸ್​ ಮೇಲೆ ಬುಲ್ಡೋಜರ್​ ಓಡಿಸಿದರು ಈ ಮುಖ್ಯಮಂತ್ರಿ!

buldozer
Published on

ಗೌಹಾಟಿ : ಅಸ್ಸಾಂನ ನಾಗಾವೊನ್​ ಮತ್ತು ಹೊಜಾಯಿ ನಗರಗಳಲ್ಲಿ ಕಳ್ಳಸಾಗಾಣಿಕೆದಾರರಿಂದ 'ಜಪ್ತಿಪಡಿಸಿಕೊಳ್ಳಲಾದ ಮಾದಕ ವಸ್ತುಗಳ ವಿಲೇವಾರಿ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರು ಇಂದು ಭಾಗವಹಿಸಿದರು. ಕಳೆದ ಕೆಲವು ತಿಂಗಳಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಅಸ್ಸಾಂ ಪೊಲೀಸರು ಜಪ್ತಿಪಡಿಸಿಕೊಂಡಿದ್ದ ಸುಮಾರು 170 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

ಈ ಸಂದರ್ಭದಲ್ಲಿ ನಾಶಪಡಿಸುವುದಕ್ಕಾಗಿ ನೆಲದ ಮೇಲೆ ಜೋಡಿಸಿಟ್ಟಿದ್ದ ಕಾಫ್ ಸಿರಪ್​ನಂಥ ಮಾದರಿಯ ಮಾದಕ ವಸ್ತುಗಳ ಮೇಲೆ, ಖುದ್ದು ಸಿಎಂ ಸರ್ಮ ಅವರೇ ಬುಲ್ಡೋಜರ್​ ಓಡಿಸಿದರು. ಈ ಕುರಿತಾದ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆ ಪ್ರಕಟಿಸಿದೆ.

ಜಪ್ತಿಗೊಂಡ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ಬೆಂಕಿ ಹತ್ತಿಸಿ ಸುಡುವ ಕಾರ್ಯಕ್ರಮಕ್ಕೂ ಸಿಎಂ ಸರ್ಮ ಚಾಲನೆ ನೀಡಿದರು. ರಾಜ್ಯ ಸಚಿವರಾದ ಪಿಯೂಶ್​ ಹಜಾರಿಕ, ಕೇಶಬ್ ಮಹಂತ ಮತ್ತು ಇತರ ಶಾಸಕರು ಭಾಗವಹಿಸಿದ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಪ್ರೇಕ್ಷಕರಾಗಿದ್ದರು.

ರಾಜ್ಯದ ಯುವಜನರನ್ನು ಡ್ರಗ್ಸ್​ ವಿಷಜಾಲದಿಂದ ರಕ್ಷಿಸುವ ಮತ್ತು ಡ್ರಗ್ಸ್​ ಕಳ್ಳಸಾಗಣೆಯನ್ನು ನಿಲ್ಲಿಸುವ ಹೋರಾಟ ಮುಂದುವರಿಯುವುದು ಎಂದು ಟ್ವೀಟ್​ ಮಾಡಿರುವ ಸರ್ಮ ಅವರು, ರಾಜ್ಯ ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಜಪ್ತಿಯಾದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಎರಡು ದಿನಗಳ ಬಹಿರಂಗ ಕಾರ್ಯಕ್ರಮ ನಡೆಸಿ ನಾಶಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net