VIDEO: ಗಣಪತಿ ಮೂರ್ತಿಯನ್ನು ನೆಲಕ್ಕೆಸೆದ ಬುರ್ಖಾಧಾರಿ ಮಹಿಳೆ ವಿರುದ್ಧ ಕ್ರಮ ಜರುಗಿಸಿದ ಮುಸ್ಲಿಂ ರಾಷ್ಟ್ರ!

Burqa-clad woman
Published on

ಮನಾಮಾ​: ಬಹರೈನ್​ನ ರಾಜಧಾನಿ ಮನಾಮಾಗೆ ಸಮೀಪದ ಜುಫೈರ್​ ಎಂಬಲ್ಲಿನ ಸೂಪರ್​ಮಾರ್ಕೆಟ್ ಒಂದಕ್ಕೆ ತೆರಳಿದ್ದ ಬುರ್ಖಾಧಾರಿ ಮಹಿಳೆ, "ಇದು ಮುಸ್ಲಿಂ ರಾಷ್ಟ್ರ.. ಇಲ್ಲಿ ಇದಕ್ಕೆ ಜಾಗವಿಲ್ಲ" ಎನ್ನುತ್ತ ಒಂದೊಂದೇ ಗಣಪತಿ ಮೂರ್ತಿಗಳನ್ನು ನೆಲಕ್ಕೆ ಎಳೆದು ಹಾಕಿ ಒಡೆದು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಬುರ್ಖಾಧಾರಿ ಮಹಿಳೆಯ ಈ ವರ್ತನೆಯನ್ನು ತಡೆಯುವುದಕ್ಕೆ ಅಲ್ಲಿದ್ದ ಅಂಗಡಿ ಸಹಾಯಕ ಅರೆಬಿಕ್​ನಲ್ಲಿ ಪ್ರಯತ್ನಿಸುತ್ತಿದ್ದ. ಆದಾಗ್ಯೂ, ಆಕೆ ಒಂದೊಂದೇ ಗಣಪತಿ ಮೂರ್ತಿಯನ್ನು ಶೆಲ್ಫ್​ನಿಂದ ಕೆಳಕ್ಕೆ ಎಸೆದು ಹಾಕುತ್ತಿರುವುದು ಕಂಡುಬಂದಿದೆ. ಆ ಸಂದರ್ಭದಲ್ಲಿ ಆಕೆ, ಇದು ಮುಸ್ಲಿಂ ರಾಷ್ಟ್ರ ಇಲ್ಲಿ ಯಾರು ಈ ಮೂರ್ತಿಗಳನ್ನು ಪೂಜೆ ಮಾಡ್ತಾರೋ ನೋಡೇ ಬಿಡುವ. ಪೊಲೀಸರನ್ನು ಕರೆಯಿರಿ ಎಂದು ಕೂಗಾಡಿದ್ದಳು.

54 ವರ್ಷದ ಆಕೆಯ ವಿರುದ್ಧ ಅಂಗಡಿಗೆ ಹಾನಿಗೊಳಿಸಿದ್ದು ಮತ್ತು ಧಾರ್ಮಿಕ ಮೂರ್ತಿಗಳನ್ನು ಒಡೆದು ಹಾಕಿದ್ದರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಹರೈನ್ ಪೊಲೀಸರು, ಕಾನೂನು ಪ್ರಕಾರ ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ವಿಚಾರವನ್ನು ಅಲ್ಲಿನ ಗೃಹ ಸಚಿವಾಲಯ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಒಂದರ ಮೂಲಕ ಇಡೀ ರಾಷ್ಟ್ರವನ್ನು ಅದೇ ಕಣ್ಣಿನಿಂದ ನೋಡಬೇಡಿ. ಬಹರೈನ್ ಮುಸ್ಲಿಂ ರಾಷ್ಟ್ರವಾದರೂ ಇಲ್ಲಿ ಸಾಮರಸ್ಯವಿದೆ ಎಂದೂ ಅನೇಕರು ಮನವಿ ಮಾಡಿದ್ದು, ಶ್ರೀಕೃಷ್ಟ ದೇವಸ್ಥಾನದ ಫೋಟೋವನ್ನು ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net