

ಜಗತ್ತು ಈ ವರ್ಷದ ಮೊದಲ ಸೂರ್ಯಗ್ರಹಣವನ್ನು ಎದುರು ನೋಡುತ್ತಿದೆ. ದಿನದ ಅವಧಿ ಹೆಚ್ಚಿರುವ ಜೂನ್ 21ರಂದೇ ಈ ಗ್ರಹಣ ಸಂಭವಿಸುತ್ತಿರುವುದು ಈ ಸಲದ ವಿಶೇಷ. ಚಂದ್ರಗ್ರಹಣವನ್ನು ನೋಡುವಂತೆ ಬರಿಗಣ್ಣಿನ ಚಂದ್ರಗ್ರಹಣ ನೋಡಲಾಗದು. ಕಣ್ಣಿನ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡೇ ಸೂರ್ಯಗ್ರಹಣ ವೀಕ್ಷಿಸಬೇಕು ಎಂದು ಪರಿಣತರು ಯಾವಾಗಲೂ ಸಲಹೆಕೊಡುತ್ತಾರೆ.
ಸೂರ್ಯಗ್ರಹಣ ಎಂದರೆ ಖಗೋಳದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಸೂರ್ಯನ ಬೆಳಕು ಭೂಮಿಗೆ ತಲುಪುವುದನ್ನು ತಡೆಯುತ್ತದೆ. ಈ ವಿದ್ಯಮಾನವನ್ನು ಸೂರ್ಯ ಗ್ರಹಣ ಎಂದು ಹೇಳುತ್ತಾರೆ. ಈ ಅವಧಿಯಲ್ಲಿ ಚಂದ್ರನ ನೆರಳು ಭೂಮಿ ಮೇಲೆ ಬೀಳುತ್ತದೆ. ಮೊದಲ ನೆರಳನ್ನು ಅಂಬ್ರಾ(ಪೂರ್ಣ ನೆರಳು) ಎಂದೂ, ವಿಸ್ತೃತ ನೆರಳನ್ನು ಪೆನುಂಬ್ರಾ(ಅರೆ ನೆರಳು) ಎಂದೂ ಕರೆಯುತ್ತಾರೆ.
ಸಮಯ ಗ್ರಹಣ ಬೆಳಗ್ಗೆ 9.15 ಭಾಗಶಃ ಸೂರ್ಯಗ್ರಹಣ ಶುರು ಬೆಳಗ್ಗೆ 10.17 ಪೂರ್ಣ ಸೂರ್ಯಗ್ರಹಣ ಶುರು ಮಧ್ಯಾಹ್ನ 12.10 ಸೂರ್ಯಗ್ರಹಣ ಪೂರ್ಣ ಅಪರಾಹ್ನ 2.02 ಪೂರ್ಣ ಸೂರ್ಯಗ್ರಹಣ ಮುಕ್ತಾಯ ಅಪರಾಹ್ನ 3.04 ಭಾಗಶಃ ಸೂರ್ಯಗ್ರಹಣ ಮುಕ್ತಾಯ
ಟೈಮ್ ಆ್ಯಂಡ್ ಡೇಟ್ ಡಾಟ್ ಕಾಮ್ ಮಾಹಿತಿ ಪ್ರಕಾರ, ಸೂರ್ಯಗ್ರಹಣವು ಭಾರತದಲ್ಲಿ ಜೂನ್ 21ರಂದು ಬೆಳಗ್ಗೆ 9.15ಕ್ಕೆ ಶುರುವಾಗಲಿದ್ದು, ಅಪರಾಹ್ನ 3.04 ಗಂಟೆಗೆ ಕೊನೆಗೊಳ್ಳಲಿದೆ. ಭಾರತದಲ್ಲಿ ಇದು ಖಂಡಗ್ರಾಸ ಗ್ರಹಣವಾಗಿ ಗೋಚರಿಸಲಿದೆ. ಖಂಡಗ್ರಾಸ ಸೂರ್ಯಗ್ರಹಣ ಎಂದರೆ ಸೂರ್ಯನ ಒಂದು ಭಾಗ ಮಾತ್ರ ಚಂದ್ರ ಆವರಿಸಿಕೊಂಡಾಗ ಭೂಮಿಯ ಮೇಲೆ ಆ ನೆರಳು ಬಿದ್ದು ಜನರಿಗೆ ಸೂರ್ಯ ಕಾಣುವ ಸ್ಥಿತಿ. ಮುಂದಿನ ಸೂರ್ಯ ಗ್ರಹಣ ಡಿಸೆಂಬರ್ 14- 15ರಂದು ನಡೆಯಲಿದೆ.
ಸೂರ್ಯಗ್ರಹಣದ ಗಮನಾರ್ಹ ಅಂಶಗಳಿವು: ಮೂರು ರೀತಿಯ ಸೂರ್ಯಗ್ರಹಣ - ಪೂರ್ಣ ಗ್ರಹಣ, ವಾರ್ಷಿಕ ಗ್ರಹಣ ಮತ್ತು ಭಾಗಶಃ ಗ್ರಹಣ. ಈ ಸಲದ್ದು ವಾರ್ಷಿಕ ಸೂರ್ಯ ಗ್ರಹಣ - ಇದು ಚಂದ್ರನು ತನ್ನ ಕಕ್ಷೆಯಿಂದ ಸಾಮಾನ್ಯಕ್ಕಿಂತ ದೂರ ಇರುವಾಗಲೇ ಆಗುತ್ತಿದ್ದು, ಚಂದ್ರನನ್ನು ಚಿಕ್ಕದಾಗಿ ಗೋಚಿರಿಸುವಂತೆ ಮಾಡಿ ಸೂರ್ಯನನ್ನು ಸಂಪೂರ್ಣ ಆವರಿಸುವಂತಹ ವಿದ್ಯಮಾನ ಗೋಚರಿಸುತ್ತದೆ.
ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳು ಒಂದು ಸ್ಥಳದಲ್ಲಿ ಆರಂಭವಾಗಿ ಇನ್ನೊಂದರಲ್ಲಿ ಕೊನೆಗೊಳ್ಳುತ್ತದೆ. ಒಂದು ವರ್ಷದ ಅವಧಿಯಲ್ಲಿ ಎರಡು ಗ್ರಹಣ ಅಥವಾ ಕೆಲವೊಮ್ಮೆ 5 ಸೂರ್ಯಗ್ರಹಣಗಳೂ ಸಂಭವಿಸಬಹುದಾಗಿದೆ.
ಪೂರ್ಣ ಸೂರ್ಯಗ್ರಹಣ ವಿರಳ ವಿದ್ಯಮಾನವಾಗಿದ್ದು ಪ್ರತಿ 18 ತಿಂಗಳುಗಳಿಗೆ ಒಮ್ಮೆ ನಡೆಯುವಂಥದ್ದು. ನಾಸಾ ಹೇಳುವ ಪ್ರಕಾರ, ಸೂರ್ಯನನ್ನು ಚಂದ್ರ ಶೇಕಡ 90 ರಷ್ಟು ಆವರಿಸದಿದ್ದರೆ ಆ ವಿದ್ಯಮಾನ ಗಮನಕ್ಕೇ ಬರಲ್ಲ. ಸಾಮಾನ್ಯವಾಗಿ ಪೂರ್ಣಸೂರ್ಯಗ್ರಹಣದ ಅವಧಿ 7.5 ನಿಮಿಷ. (ಏಜೆನ್ಸೀಸ್)