ಒಡಿಶಾ ಅರಣ್ಯದಲ್ಲಿ ಕ್ಯಾಮೆರಾ ಕಣ್ಣಿಗೆ ಅಪರೂಪದ ಕಪ್ಪುಬಣ್ಣದ ಹುಲಿ ಪತ್ತೆ! ವಿಡಿಯೋ ವೈರಲ್​

Black Tiger
Published on

ಭುವನೇಶ್ವರ್: ಒಡಿಶಾದ ಸಿಮಿಲಿಪಾಲ್​ ಹುಲಿ ಸಂರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪುಬಣ್ಣದ ಹುಲಿ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಪ್ಪು ಹುಲಿಗಳನ್ನು ಮೆಲನಿಸ್ಟಿಕ್ ಹುಲಿಗಳು ಎಂದು ಸಹ ಕರೆಯಲಾಗುತ್ತದೆ.

ಈ ವಿಶೇಷ ಪ್ರಾಣಿಯ ದೃಶ್ಯವನ್ನು ಕ್ಯಾಮೆರಾ ಟ್ರ್ಯಾಪ್​ ಸಾಧನದಿಂದ ಸೆರೆಹಿಡಿಯಲಾಗಿದೆ. ವನ್ಯಜೀವಿಗಳ ಜನಸಂಖ್ಯೆ ಮತ್ತು ಪರಸ್ಪರ ಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಈ ಕ್ಯಾಮೆರಾ ಟ್ರ್ಯಾಪ್​ ಸಾಧನವನ್ನು ಬಳಸಲಾಗುತ್ತದೆ. ಹುಲಿಯ ಚರ್ಮ ಮತ್ತು ಕೂದಲು ಹೆಚ್ಚು ಕಪ್ಪು ವರ್ಣದಿಂದ ಕೂಡಿದೆ.

ಕಪ್ಪು ವರ್ಣದ ಹುಲಿಯ ವಿಡಿಯೋವನ್ನು ಐಎಫ್​ಎಸ್​ (ಭಾರತೀಯ ಅರಣ್ಯ ಸೇವೆ) ಅಧಿಕಾರಿ ಹಾಗೂ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಅರಣ್ಯಗಳ ಮಹಾನಿರೀಕ್ಷಕರಾಗಿರುವ ರಮೇಶ್​ ಪಾಂಡೆ ಅವರು ಶೇರ್​ ಮಾಡಿಕೊಂಡಿದ್ದಾರೆ.

ಪಾಂಡೆ ಅವರು ಈ ಅಪರೂಪದ ದೃಶ್ಯವನ್ನು ಸಾರ್ವಜನಿಕರ ಗಮನಕ್ಕೆ ತಂದ ಬಳಿಕ ಕಪ್ಪು ಬಣ್ಣದ ಹುಲಿ ಮತ್ತು ಸಿಮಿಲಿಪಾಲ್ ಸಂರಕ್ಷಿತಾರಣ್ಯದ ಬಗ್ಗೆ ಜಾಲತಾಣದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ.

ಒಡಿಶಾದ ಸಿಮಿಲಿಪಾಲ್​ ಹುಲಿ ಸಂರಕ್ಷಿತಾರಣ್ಯದಲ್ಲಿ ಕ್ಯಾಮೆರಾ ಟ್ರ್ಯಾಪ್​ನಲ್ಲಿ ಸೆರೆಯಾದ ಸುಂದರ ಕಪ್ಪು ಬಣ್ಣದ ಹುಲಿಯ ದೃಶ್ಯವಿದು. ಹುಲಿಗಳ ಜನಸಂಖ್ಯೆಯಲ್ಲಿನ ಆನುವಂಶಿಕ ರೂಪಾಂತರಗಳಿಂದಾಗಿ ನಾವು ಕಪ್ಪು ಹುಲಿಗಳನ್ನು ನೋಡಬಹುದಾದ ಏಕೈಕ ಸ್ಥಳ ಸಿಮಿಲಿಪಾಲ್​ ಸಂರಕ್ಷಿತಾರಣ್ಯವಾಗಿದೆ ಎಂದು ರಮೇಶ್​ ಪಾಂಡೆ ಅವರು ಬರೆದುಕೊಂಡಿದ್ದಾರೆ.

ಈ ಕ್ಯಾಮೆರಾ ಟ್ರ್ಯಾಪ್​ ಅನ್ನು ಸಾಮಾನ್ಯವಾಗಿ ಮಂಡಿಯ ಎತ್ತರದಲ್ಲಿ ಅವಳಡಿಸಲಾಗುತ್ತದೆ. ಅಂದರೆ, ನೆಲದಿಂದ ಎರಡು ಅಡಿ ಎತ್ತರದಲ್ಲಿ ಇರಿಸಲಾಗುತ್ತದೆ. ಕ್ಯಾಮೆರಾ ಕಳ್ಳತನವನ್ನು ತಡೆಗಟ್ಟಲು ಗಟ್ಟಿಮುಟ್ಟಾದ ಮರಗಳಲ್ಲಿ ಅಳವಡಿಸಲಾಗುತ್ತದೆ. ವನ್ಯಜೀವಿ ನಡವಳಿಕೆಯನ್ನು ಸೆರೆಹಿಡಿಯಲು ಈ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net