ಪುಣೆಯಲ್ಲಿ ಮಕ್ಕಳೇ ತುಂಬಿದ್ದ ಶಾಲಾ ಬಸ್ ಮರಕ್ಕೆ ಡಿಕ್ಕಿ; ವಿಡಿಯೋ ವೈರಲ್

accident
Published on

ಮಹಾರಾಷ್ಟ್ರ: ಪುಣೆಯ ವಾಘೋಲಿ ಕ್ಯಾಂಪಸ್‌ನಲ್ಲಿ ಶಾಲಾ ಬಸ್ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳು ರೈಸಿಂಗ್ ಸ್ಟಾರ್ ಶಾಲೆಯವರು. ಸದ್ಯ ಗಾಯಾಳು ವಿದ್ಯಾರ್ಥಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಅಪಘಾತ ವಿದ್ಯಾರ್ಥಿಗಳ ಸುರಕ್ಷತೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಸಂಬಂಧ ಲೋಣಿಕಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ನಂತರ ಕಿರುಚಲು ಪ್ರಾರಂಭಿಸಿದ ವಿದ್ಯಾರ್ಥಿಗಳು
ಕಾನೂನು ಬಾಹಿರವಾಗಿ ಬಸ್ ಓಡಿಸುವವರ ಮೇಲೆ ಆರ್‌ಟಿಒ ನಿಯಂತ್ರಣವಿಲ್ಲ ಎಂಬುದು ಪಾಲಕರ ಆರೋಪ. ಲೋಣಿಕಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದೆ. ವೇಗವಾಗಿ ಬಂದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿಗಳು ಗಾಬರಿಯಿಂದ ಕಿರುಚಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಅಲ್ಲಿದ್ದವರು ಬಸ್ಸಿನಲ್ಲಿ ಕುಳಿತ ಮಕ್ಕಳಿಗೆ ಸಹಾಯ ಮಾಡಲು ಮುಗಿಬಿದ್ದರು.

ಹಲವರಿಗೆ ಗಾಯ
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ರೈಸಿಂಗ್ ಸ್ಟಾರ್ ಶಾಲೆಯ ಬಸ್ ಬರುತ್ತಿದ್ದಾಗ ವಾಘೋಲಿ ಕ್ಯಾಂಪಸ್‌ನಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಚಾಲಕನ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net