

ಮುಂಬೈ: ಮೀಸಲಾತಿಗೆ ಒತ್ತಾಯಿಸಿ ಬಿಜೆಪಿ ಶಾಸಕ, ಮಹಾರಾಷ್ಟ್ರ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಧಂಗರ್ (ಕುರುಬ) ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರೊಬ್ಬರು ಅವರ ಮೇಲೆ ಅರಿಶಿನ ಎರಚಿ ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೃತ್ಯ ಎಸಗಿದ ವ್ಯಕ್ತಿಯ ನಡೆ ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಸೊಲ್ಲಾಪುರದಲ್ಲಿರುವ ಸರ್ಕಾರಿ ಗೆಸ್ಟ್ ಹೌಸ್ನಲ್ಲಿ ಮೀಸಲಾತಿಗೆ ಒತ್ತಾಯಿಸಿ ದಂಗರ್ (ಕುರುಬ) ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸುತ್ತಿದ್ದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಸಮುದಾಯದ ಮುಖಂಡನೋರ್ವ ಏಕಾಏಕಿ ಸಚಿವರ ಮೇಲೆ ಅರಿಶಿನವನ್ನು ಎರಚಿ ಮೀಸಲಾತಿ ನೀಡುವಂತೆ ಘೋಷಣೆಗಳನ್ನು ಕೂಗುತ್ತಾನೆ. ಅಲ್ಲೇ ಇದ್ದ ಸಚಿವರ ಬೆಂಲಿಗರು ಹಾಗೂ ಅವರ ಅಂಗರಕ್ಷಕರು ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತನನ್ನು ಶೇಖರ್ ಬಂಗಲೆ ಎಂದು ಗುರುತಿಸಲಾಗಿದ್ದು, ತನ್ನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾರೆ. ಧಂಗರ್ ಸಮುದಾಯವನ್ನು ಪರಿಶಿಷ್ಟ ಪಂಗಡ (ST)ಕ್ಕೆ ಸೇರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದ ಸಚಿವರ ಮೇಲೆ ಕಪ್ಪು ಬಣ್ಣ ಎರಚಲಾಗುವುದು ಎಂದು ಬಂಧಿತ ವ್ಯಕ್ತಿ ಎಚ್ಚರಿಸಿದ್ದಾರೆ.