ಪಂದ್ಯ ಸೋತಿದ್ದಕ್ಕೆ ಮೈದಾನದಲ್ಲೇ ಕಣ್ಣೀರಿಟ್ಟ ಪಾಕ್​ ಆಟಗಾರ​! ಮೆಚ್ಚುಗೆಗೆ ಪಾತ್ರವಾಯ್ತು ರೋಹಿತ್ ನಡೆ

Rohit Sharma
Published on

ನ್ಯೂಯಾರ್ಕ್​: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ನಿನ್ನೆ (ಜೂನ್​ 09) ನಡೆದ ಥ್ರಿಲ್ಲಿಂಗ್ ಮ್ಯಾಚ್ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಕ್ರಿಕೆಟ್ ಮಜಾ ನೀಡಿದೆ. ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿದ್ದ ಪಿಚ್‌ನಲ್ಲಿ ಉಭಯ ದೇಶಗಳ ಬೌಲರ್‌ಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ತನ್ನ ಸೂಪರ್ ಬೌಲಿಂಗ್ ಮೂಲಕ ಜಯ ಸಾಧಿಸಿತು.

ಕೇವಲ 119 ರನ್‌ಗಳ ಸಾಧಾರಣ ಗುರಿಯನ್ನು ರಕ್ಷಣೆ ಮಾಡಿದ ಭಾರತೀಯ ಬೌಲರ್‌ಗಳು ವಿಶಿಷ್ಟವಾದ ಜಯವನ್ನು ನೀಡಿದರು. ಆದರೆ, ಭಾರತ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲಾಗದ ಪಾಕಿಸ್ತಾನದ ಸ್ಟಾರ್ ಬೌಲರ್ ನಾಸೀಮ್ ಶಾ ಮೈದಾನದಲ್ಲೇ ಕಣ್ಣೀರಿಟ್ಟರು. ಈ ವೇಳೆ ಮತ್ತೊಬ್ಬ ಬೌಲರ್ ಶಾಹೀನ್ ಆಫ್ರಿದಿ ನಸೀಮ್​ಗೆ ಸಾಂತ್ವನ ಹೇಳಿದರು. ಅದಕ್ಕಿಂತಲೂ ಹೆಚ್ಚಾಗಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ನಾಸೀಮ್​ಗೆ ಸಮಾಧಾನ ಮಾಡಿದ್ದು, ಎಲ್ಲರ ಮನಗೆದ್ದಿದೆ. ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

120 ರನ್​ಗಳ ಸಾಧಾರಣ ಗುರಿಯೊಂದಿಗೆ ಅಖಾಡಕ್ಕಿಳಿದ ಪಾಕಿಸ್ತಾನಕ್ಕೆ ಭಾರತದ ಬೌಲರ್​ಗಳು ತಡೆಯೊಡ್ಡಲು ಮುಂದಾದರು. ಆದರೆ, ಅಂತಿಮವಾಗಿ ನಸೀಮ್ ಶಾ ಪಾಕ್ ಗೆಲುವಿಗಾಗಿ ಹೋರಾಡಿದರು. ಕೇವಲ 4 ಎಸೆತಗಳಲ್ಲಿ 2 ಬೌಂಡರಿ ಸಹಿತ 10 ರನ್ ಗಳಿಸಿದರು. ಇದರಿಂದ ಟೀಮ್​ ಇಂಡಿಯಾ ಕೊಂಚ ಗೊಂದಲಕ್ಕೆ ಸಿಲುಕಿತ್ತು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ 11 ರನ್ ಗಳಿಸಿತು. ಅದಕ್ಕೆ ನಸೀಮ್ ಶಾ ಕಾರಣ. ಆದರೆ, ಪಾಕಿಸ್ತಾನ 6 ರನ್​ಗಳ ಅಂತರದಲ್ಲಿ ಸೋಲುಂಡಿತು. 4 ಓವರ್​ಗಳಲ್ಲಿ ಕೇವಲ 21 ರನ್ ನೀಡಿ 3 ನಿರ್ಣಾಯಕ ವಿಕೆಟ್ ಕಬಳಿಸಿದ ನಸೀಮ್ ಶಾ, ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದ್ದರು.

ನಸೀಮ್ ಶಾ ಅವರು ತಮ್ಮ ಮೊದಲ ಓವರ್‌ನಲ್ಲಿ ಕೊಹ್ಲಿಯಂತಹ ಸ್ಟಾರ್ ಆಟಗಾರನನ್ನು ಔಟ್ ಮಾಡಿ ಪಾಕಿಸ್ತಾನಕ್ಕೆ ಸೂಪರ್ ಸ್ಟಾರ್ಟ್ ನೀಡಿದರು. ಬ್ಯಾಟಿಂಗ್​ನಲ್ಲೂ ಶಕ್ತಿ ಮೀರಿ ಹೋರಾಡಿದರು. ಹೀಗಿದ್ದರೂ ಸೋಲಿನ ನಂತರ ನೋವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿಸಿ ಪೆವಿಲಿಯನ್​ಗೆ ಹೋಗುವಾಗ ನಸೀಮ್ ಶಾ ಅಳುತ್ತಿದ್ದರು. ಈ ವೇಳೆ ರೋಹಿತ್​ ಶರ್ಮ ಕೂಡ ನಸೀಮ್​ ಬಳಿ ಬಂದು ಅಳಬೇಡ ಎಂದು ಸಮಾಧಾನ ಪಡಿಸಿದರು ಮತ್ತು ನಸೀಮ್​ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೊಂದೆಡೆ ನಾಟೌಟ್ ಆಗಿದ್ದ ಶಾಹೀನ್ ಅಫ್ರಿದಿ ಕೂಡ ನಸೀಮ್ ಶಾಗೆ ಸಾಂತ್ವನ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net