

ಬೆಂಗಳೂರು: ಕರೋನಾ ಲಾಕ್ಡೌನ್ ಪರಿಸ್ಥಿತಿಯಲ್ಲಿ ಅನೇಕರ ಸೃಜನಶೀಲತೆ ಹೊರಹೊಮ್ಮಿದೆ. ಹಾಗೆ ಯಾರಿಗೋ ಹೊಳೆದ ಚಹಾ ಮಾಡುವ ವಿಧಾನ ಕಳೆದ ಒಂದು ತಿಂಗಳಿಂದ ಬಹಳ ಟ್ರೆಂಡಿಂಗ್ನಲ್ಲಿದೆ. ದೇಶಾದ್ಯಂತ ಹಲವೆಡೆ ಅನೇಕರು ಇದನ್ನು ಟ್ರೈ ಮಾಡಿದ್ದು, ವಿಡಿಯೋ ಮಾಡಿ ಯೂಟ್ಯೂಬ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲೂ ಅಪ್ಲೋಡ್ ಮಾಡಿ ಗಮನಸೆಳೆದಿದ್ದಾರೆ.
ಚಹ ಮಾಡುವ ವಿಧಾನ ಒಂದೇ ಆಗಿದ್ದರೂ, ಪ್ರತಿ ವಿಡಿಯೋದಲ್ಲೂ ಚಹಾ ಮಾಡುವ ವಿಧಾನವನ್ನು ನಿರೂಪಿಸುವಾಗಿನ ಅವರ ಹಾವ, ಭಾವಗಳು ಕೂಡ ಗಮನಸೆಳೆಯುತ್ತಿವೆ. ಹೀಗಾಗಿ, ಅಂತಹ ವಿಡಿಯೋಗಳಿಗೆ ವೀಕ್ಷಕರ ಕೊರತೆಯೂ ಇಲ್ಲ. ಕೆಲವರು ಗಂಭೀರವಾಗಿ ನಿರೂಪಿಸುತ್ತಿದ್ದರೂ ಕೇಳುವುದಕ್ಕೆ ಹಿತವೆನಿಸುವಂತೆ ಇದ್ದು, ಆ ಖುಷಿಗೋ ಏನೋ ಆ ವಿಡಿಯೋಗಳನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಪ್ರಶಾಂತ್ ಭಟ್ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಗೆರಟೆಯಲ್ಲಿ ಚಹಾ ಮಾಡುವ ವಿಧಾನ ಗಮನಸೆಳೆಯುತ್ತಿದೆ. (ಮೇಲಿರುವ ವಿಡಿಯೋ ಕ್ಲಿಕ್ ಮಾಡಿ ನೋಡಬಹುದು)
ಕನ್ನಡದಲ್ಲಿ ಗೆರಟೆ ಚಹಾ, ತಮಿಳಿನಲ್ಲಿ, ಮಲಯಾಳಂನಲ್ಲಿ ಚಿರಟ ಚಾಯ (chiratta chaya, chiratta tea, Coconut Shell Tea,) ಟ್ರೆಂಡಿಂಗ್ನಲ್ಲಿದೆ. ಟಿಕ್ ಟಾಕ್ ಮೂಲಕ ಟ್ರೆಂಡಿಂಗ್ ಆಗಿರುವ ಗೆರಟೆ ಚಹಾ ಈಗ ಯೂಟ್ಯೂಬ್ನಲ್ಲಿ ಟ್ಯುಟೋರಿಯಲ್ ರೂಪದಲ್ಲಿ ಕಾಣಿಸಿಕೊಂಡಿದೆ. ಒಬ್ಬರು ಮಾಡಿದ್ದನ್ನು ಮತ್ತೊಬ್ಬರು ಮಗದೊಬ್ಬರು ಹೀಗೆ ಹಲವರು ಟ್ರೆಂಡಿಂಗ್ ಗೆರಟೆ ಚಹಾ ಮಾಡಿ ರುಚಿ ನೋಡತೊಡಗಿದ್ದಾರೆ. ಇದೇ ರೀತಿ, ತೆಂಗಿನಕಾಯಿ ಗೆರಟೆ ಅನೇಕರಿಗೆ ಬೇರೆ ಬೇರೆ ಪ್ರೇರಣೆಗಳನ್ನು ನೀಡಿದ್ದು, ಕೆಲವರು ಗೆರಟೆಯಲ್ಲಿ ಮೊಸರು ಮಾಡಿ ಅದನ್ನು ಬೇರೆ ಬೇರೆ ಖಾದ್ಯಗಳನ್ನು ಮಾಡುತ್ತಾರೆ. ಇಲ್ಲಿ ವಿದ್ಯಾ ಕೃಪಾ ಅವರು ಗೆರಟೆಯಲ್ಲಿ ಮೊಸರು ಮಾಡಿ ಅದನ್ನು ಉಪಯೋಗಿಸಿ ಬೂದುಗುಂಬಳ ಮೊಸರುಬಜ್ಜಿ ಮಾಡುವುದು ಹೇಗೆಂಬ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.