More

    ಕರೊನಾ ಅಟ್ಯಾಕ್ ಆದ್ರೂ ಗೆದ್ದೆ ನಾನು: ಅಮ್ಮನನ್ನು ರಿಸ್ಕ್​​ಗೆ ತಳ್ಳೋಕೆ ರೆಡಿ ಇರಲಿಲ್ಲ..

    ನವದೆಹಲಿ: ಕೋವಿಡ್ 19 ಸೋಂಕಿಗೆ ಒಳಗಾಗಿ, ಅದರಿಂದ ಮುಕ್ತರಾದ ಸನ್ನಿವೇಶವನ್ನು ದೆಹಲಿಯ 25 ವರ್ಷದ ಯುವತಿ ಮೆಹರ್ ಭಗತ್​ ವಿಡಿಯೋ ಮೂಲಕ ವಿವರಿಸಿದ್ದಾರೆ. ಸೋಂಕಿಗೆ ಒಳಗಾದಾಗ ಆದ ಅನುಭವವನ್ನು ವಿಡಿಯೋದಲ್ಲಿ ವಿವರಿಸಿರುವ ಆಕೆ, ಕೋವಿಡ್​ 19 ಸೋಂಕಿನ ಗುಣಲಕ್ಷಣ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಹೇಳಿದ್ದಾರೆ. ಕ್ವಾರಂಟೈನ್ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಆಹಾರಗಳ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ವಿಡಿಯೋ ಹಿಂದಿಯಲ್ಲಿದ್ದು, ಅದರ ಕನ್ನಡದ ಸಾರ ಇಲ್ಲಿದೆ.

    ನನ್ನ ಹೆಸರು ಮೆಹರ್​. ಈ ವಿಡಿಯೋದಲ್ಲಿ ನಾನು ನನ್ನ ಅನುಭವವನ್ನು ಮತ್ತು ಕರೊನಾ ವೈರಸ್​ನಿಂದ ಮುಕ್ತರಾದ ಬಗೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಅಂದು ಮೇ 29. ಬೆಳಗ್ಗೆ ನಾನು ಎದ್ದಾಗ ನನ್ನ ಮೈ ಬಿಸಿಯಾಗಿತ್ತು. ನನ್ನ ಬೆನ್ನು, ಕಾಲುಗಳು ಮತ್ತು ತಲೆ ಬಹಳ ನೋಯುತ್ತಿತ್ತು. ಬಹಳ ನಿತ್ರಾಣಗೊಂಡಂತೆ ನನಗೆ ಭಾಸವಾಗುತ್ತಿತ್ತು. ಹಿಂದಿನ ದಿನ ಹೆಚ್ಚು ಚಟುವಟಿಕೆಯಿಂದ ಇದ್ದ ಕಾರಣ ಹೀಗಾಗುತ್ತಿರಬಹುದು ಎಂದು ನಾನು ಭಾವಿಸಿದ್ದೆ. ಮುಂದಿನ ಮೂರ್ನಾಲ್ಕು ಗಂಟೆಯ ಅವಧಿಯಲ್ಲಿ ಇದು ಹೆಚ್ಚುತ್ತ ಹೋಯಿತು. ನನ್ನ ಮೈ ಬಿಸಿ ಏರುತ್ತ ಹೋಯಿತು. ನನ್ನ ಬಳಿ ಥರ್ಮೋ ಮೀಟರ್ ಇರಲಿಲ್ಲ. ಜ್ವರ ಎಷ್ಟಿದೆ ಎಂದು ಖಚಿತವಾಗಿ ಪರಿಶೀಲಿಸುವುದು ಸಾಧ್ಯವಾಗಲಿಲ್ಲ. ನಿತ್ರಾಣ ಹೆಚ್ಚಾಗುತ್ತ ಹೋಯಿತು.

    ನಂಗೆ ಹಸಿವು ಕೂಡಾ ಆಗ್ತಾ ಇರಲಿಲ್ಲ. ಕೆಲವು ದಿನಗಳ ಹಿಂದೆ ನಾನಿದ್ದ ಕಟ್ಟಡದಲ್ಲಿ ಒಬ್ಬ ಕೆಲಸಗಾರನಿಗೆ ಜ್ವರ ಬಂದಿತ್ತು. ಒಂದು ವಾರ ಕಾಲ ಆತ ಕಾಯಿಲೆ ಬಿದ್ದಿದ್ದ. ಹಾಗಾಗಿ ನಾನು ಇದು ಕರೊನಾ ವೈರಸ್​ ಆಗಿರಬಹುದೆಂಬ ನಿರ್ಣಯಕ್ಕೆ ಬಂದೆ. ಕೂಡಲೇ ನಾನು ನಮ್ಮ ಡಾಕ್ಟರ್​ಗೆ ಕರೆ ಮಾಡಿದೆ. ನನ್ನ ತಾಯಿ ಹೈ ರಿಸ್ಕ್ ಗ್ರೂಪ್​ ನಲ್ಲಿ ಇರುವ ಕಾರಣ ರಿಸ್ಕ್ ಅಥವಾ ಚಾನ್ಸ್​ ತೆಗೆದುಕೊಳ್ಳಲು ನಾನು ಬಯಸಲಿಲ್ಲ. ಕೂಡಲೇ ಡಾಕ್ಟರ್​ ಅನ್ನು ಕನ್ಸಲ್ಟ್ ಮಾಡಿ ಜ್ವರ, ತಲೆನೋವು, ಮೈಕೈ ನೋವು, ಗಂಟಲಲ್ಲಿ ಸಣ್ಣದಾಗಿ ಕಿರಿಕಿರಿ ಆಗ್ತಾ ಇರುವುದನ್ನು ಅವರ ಗಮನಕ್ಕೆ ತಂದೆ. ಮುಂದಿನ ಮೂರು ದಿನಗಳ ಅವಧಿಗೆ ಅವರು ನನಗೆ ಕೆಲವು ಮೆಡಿಕೇಶನ್ಸ್ ಪ್ರಿಸ್ಕ್ರೈಬ್ ಮಾಡಿದ್ರು. ಕೂಡಲೇ ನಾನು ಮೆಡಿಕೇಷನ್ ಶುರುಮಾಡಿದೆ.

    ಇದನ್ನೂ ಓದಿ: ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ: ಇತರ 400 ವಿದ್ಯಾರ್ಥಿಗಳಿಗೆ ಆತಂಕ!

    ಆದರೆ ನಾನು ಮೊದಲ ದಿನದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದಕ್ಕೆ ಶುರುಮಾಡಿದ್ದೆ. ನಾನೇ ಸ್ವತಃ ಐಸೋಲೇಷನ್​ಗೆ ಒಳಗಾದೆ. ಉಳಿದವರಿಂದ ಎಷ್ಟು ಸಾಧ್ಯವೋ ಅಷ್ಟು ಅಂತರ ಕಾಯ್ದುಕೊಳ್ಳತೊಡಗಿದೆ. ನನ್ನ ತಾಯಿ ಏನಾದರೂ ನನಗೆ ಯಾವುದಾದರೂ ಮೆಡಿಸಿನ್ ಅಥವಾ ಆಹಾರ ಕೊಡುವುದಕ್ಕೆ ನಾನಿದ್ದ ರೂಮಿಗೆ ಬರುತ್ತಾರೆ ಎಂದರೆ ಅವರು ಮಾಸ್ಕ್ ಸರಿಯಾಗಿ ಧರಿಸಿದ್ದಾರಾ? ಸರಿಯಾದ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರಾ ಎಂಬುದನ್ನು ಪರಿಶೀಲಿಸುತ್ತಿದ್ದೆ. ನಾನೂ ಮಾಸ್ಕ್​ ಧರಿಸಿರುತ್ತಿದ್ದೆ. ಅಲ್ಲದೆ, ನಾನು ಬಳಸಿದ ವಸ್ತುಗಳನ್ನು ಅವರು ಮುಟ್ಟದಂತೆ ಜಾಗ್ರತೆ ವಹಿಸುತ್ತಿದ್ದೆ. ನನ್ನ ಎಲ್ಲ ವಸ್ತುಗಳನ್ನು ನಾನೇ ಸ್ವಚ್ಛಗೊಳಿಸುತ್ತಿದ್ದೆ. ನನ್ನ ರೂಮನ್ನು ಸ್ವಚ್ಛವಾಗಿರುವಂತೆ ನಾನೇ ನೋಡಿಕೊಳ್ಳುತ್ತಿದ್ದೆ. ಇದಕ್ಕೆ ಯಾರ ನೆರವನ್ನೂ ಪಡೆಯುತ್ತಿರಲಿಲ್ಲ. ಅವರಿಗೆ ಸೋಂಕು ತಗುಲದಿರಲಿ ಎಂಬ ಮುಂಜಾಗ್ರತಾ ಕ್ರಮವಿದು.

    ನಾನು ಪದೇಪದೆ ಮುಟ್ಟುವ ಸ್ಥಳಗಳನ್ನು ಕೂಡಲೇ ಸ್ವಚ್ಛಗೊಳಿಸುತ್ತಿದ್ದೆ. ಮನೆಯೊಳಗೆ ಎಲ್ಲೂ ಅಡ್ಡಾಡುತ್ತಿರಲಿಲ್ಲ. ನನಗೆ ನಾನೇ ನಿರ್ಬಂಧ ಹೇರಿಕೊಂಡಿದ್ದೆ. ಮೊದಲ ಎರಡು, ಮೂರು, ನಾಲ್ಕು, ಐದನೇ ದಿನಗಳಲ್ಲಿ ಸೋಂಕಿನ ಗುಣಲಕ್ಷಣಗಳು ತೀವ್ರಗೊಂಡಿದ್ದವು. ಸಿಕ್ಕಾಪಟ್ಟೆ ನಿತ್ರಾಣ ಇತ್ತು. ಹಾಸಿಗೆಯಿಂದ ಏಳೋದಕ್ಕೆ ಆಗ್ತಾ ಇರಲಿಲ್ಲ. ಒಂದು ಸಲದ ಮೆಡಿಕೇಶನ್ ಮುಗಿಯುವುದಕ್ಕೆ ಕಾಯ್ತಾ ಇದ್ದೆ. ನಾಲ್ಕನೇ ದಿನ ಜ್ವರ ಇಳಿಯಿತು. ಆದರೆ, ನನಗೆ ಇನ್ನೂ ಹಸಿವು ಆಗ್ತಾ ಇರಲಿಲ್ಲ. ಇದನ್ನು ನಾನು ಡಾಕ್ಟರ್​ಗೆ ತಿಳಿಸಿದೆ. ಇದು ವೈರಸ್ ಸೋಂಕು ಪುನಃ ಕಾಣಿಸುವ ಲಕ್ಷಣವಿರಬಹುದು. ಇನ್ನೊಂದೆರಡು ಮೂರು ದಿನ ಕಾಯುವಂತೆ ಡಾಕ್ಟರ್ ಸೂಚಿಸಿದರು.

    ಆರಂಭದ ಮೂರ್ನಾಲ್ಕು ದಿನ ಊಟ ತಿಂಡಿ ಎಲ್ಲವೂ ರುಚಿ ಬದಲಾಗಿತ್ತು. ಉಪ್ಪು ಸರಿಯಾಗಿ ಹಾಕಿಲ್ಲವೇನೋ ಅಥವಾ ಏನೋ ವ್ಯತ್ಯಾಸವಾಗಿರಬಹುದು ಎಂದು ನಾನು ಆಲೋಚಿಸಿದ್ದೆ. ಸಂಜೆ ಚಾಕೊಲೇಟ್ ತಿಂದೆ. ಆಗ ಸ್ವಲ್ಪ ಸಿಹಿ ಮಾತ್ರ ಗೊತ್ತಾಯಿತು. ಕರೊನಾ ವೈರಸ್ ಸೋಂಕಿನ ಪ್ರಮುಖ ಗುಣಲಕ್ಷಣಗಳ ಪೈಕಿ ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು ಪ್ರಮುಖವಾದುದು ಎಂಬುದನ್ನು ನಾನು ನ್ಯೂಸ್​​ಗಳಲ್ಲಿ ಗಮನಿಸಿದ್ದೆ. ಆ ಸಮಯದಲ್ಲಿ ಭಾರತದಲ್ಲಿ ಡಯಾಗ್ನೋಸ್ ಆಗಿರುವ ಕೇಸ್​ಗಳಲ್ಲಿ ಈ ಗುಣಲಕ್ಷಣ ಇರಲಿಲ್ಲ.

    ಡಾಕ್ಟರ್​ಗೆ ಹೇಳಿದಾಗ ಅವರು ಮತ್ತೆ ಎರಡು ದಿನ ಕಾಯುವಂತೆ ಹೇಳಿದರು. ನನಗೆ ಇನ್ನೂ ನಿತ್ರಾಣವಿತ್ತು. ಈ ಅವಧಿಯಲ್ಲಿ ನಾನು 5 ಕಿಲೋ ತೂಕ ಕಳೆದುಕೊಂಡಿದ್ದೆ. ನನಗೆ ಇನ್ನೂ ಹಸಿವು ಆಗ್ತಾ ಇರಲಿಲ್ಲ. ರೂಮಿನ ಬಾಗಿಲಿನಿಂದ ಹೊರಗೆ ನಾನೊಂದು ಟೇಬಲ್ ಇಟ್ಟಿದ್ದೆ. ಅಲ್ಲಿ ನಾನು ಬಳಸುವ ಪಾತ್ರೆಗಳನ್ನು ಇರಿಸಿದ್ದೆ. ಅದರಲ್ಲಿ ತಾಯಿ ಆಹಾರವನ್ನು ಇಡುತ್ತಿದ್ದರು. ನಾನು ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿ ಮಾಸ್ಕ್ ಧರಿಸಿಕೊಂಡು ಬಾಗಿಲು ತೆರೆದು ಆ ಪಾತ್ರೆಗಳಲ್ಲಿ ಇದ್ದ ಆಹಾರವನ್ನು ತೆಗೆದುಕೊಳ್ಳುತ್ತಿದ್ದೆ. ನನ್ನ ರೂಮಿನೊಳಗೆ ಯಾರೂ ಬರದಂತೆ ನೋಡಿಕೊಳ್ಳುತ್ತಿದ್ದೆ. ಆದರೂ ರೂಮನ್ನು ಸ್ವಚ್ಛವಾಗಿ ಇರಿಸಿಕೊಳ್ಳುತ್ತಿದ್ದೆ.

    ಒಂಭತ್ತನೇ ದಿನ ನಾನು ಇನ್ನೊಬ್ಬ ಡಾಕ್ಟರನ್ನು ಕನ್ಸಲ್ಟ್ ಮಾಡಿದೆ. ನನಗಾಗುತ್ತಿರುವ ಅನುಭವವನ್ನು ವಿವರಿಸಿದೆ. ಸೋಂಕಿನ ಗುಣಲಕ್ಷಣ ವಿವರಿಸಿ ಹೇಳಿದೆ. ಆರೋಗ್ಯ ಸ್ಥಿತಿ ಸುಧಾರಿಸುತ್ತಿಲ್ಲ ಏನು ಮಾಡೋದು ಎಂದು ಕೇಳಿದೆ. ನಾನು ಇನ್ನೊಮ್ಮೆ ಕೋವಿಡ್ 19 ಟೆಸ್ಟ್ ಮಾಡಿಸಿಕೊಳ್ಳಬೇಕು. ಇನ್ನೊಂದು ಚಾನ್ಸ್ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ವಿವರಿಸಿದೆ. ಅವರು ಪ್ರಿಸ್ಕ್ರಿಪ್ಶನ್ ಕೊಟ್ರು. ನಾನು ಅಂದೇ ರಾತ್ರಿ ಕೋವಿಡ್ 19 ಟೆಸ್ಟ್​ಗೆ ನೋಂದಣಿ ಮಾಡಿಸಿಕೊಂಡೆ. ಮೂರು ದಿನಗಳ ನಂತರ ಅಪಾಯಿಂಟ್ ಮೆಂಟ್ ಸಿಕ್ತು.

    ಇದನ್ನೂ ಓದಿ: ಮಾಸ್ಕ್ ಧರಿಸದೇ ಬಂದ ಪ್ರತಾಪ್‌ಸಿಂಹಗೆ ವಿಧಾನಸೌಧದ ಬಾಗಿಲಲ್ಲೇ ತಡೆ!

    ಹನ್ನೆರಡನೇ ದಿನವೂ ನನಗೆ ನಿತ್ರಾಣ ಕಡಿಮೆ ಆಗಿರಲಿಲ್ಲ. ಹಸಿವೂ ಇರಲಿಲ್ಲ. ಆದರೂ ನಾನು ಡ್ರೈವ್ ಥ್ರೂ ಮೂಲಕ ನಾನೇ ಸ್ವತಃ ಡ್ರೈವ್ ಮಾಡಿಕೊಂಡು ಟೆಸ್ಟ್ ಮಾಡಿಸೋದಕ್ಕೆ ಹೋದೆ. ಬಹಳ ತ್ವರಿತವಾಗಿ ಟೆಸ್ಟ್ ಮಾಡಿ ಮುಗಿಸಿದ್ರು. ಅವರು ನನ್ನ ಗಂಟಲು ಮತ್ತು ಮೂಗಿನ ದ್ರವವನ್ನು ಪಡೆದರು. ನಾನು ಮತ್ತೆ ಮನೆಗೆ ಬಂದೆ. ಮನೆಯ ಮೆಟ್ಟಿಲುಗಳನ್ನು ಏರುವಾಗ ಮಾಸ್ಕ್ ಧರಿಸಿದ್ದೆ. ನನ್ನ ರೂಮಿನೊಳಗೆ ಬರುತ್ತಲೇ ಮಾಸ್ಕ್ ತೆಗೆದೆ. ಉಸಿರುಗಟ್ಟಿದಂತಾಗಿತ್ತು. ಸಾಮಾನ್ಯವಾಗಿ ಹೀಗಾಗುವುದಿಲ್ಲ. ಕೋವಿಡ್ ಇರುವ ಕಾರಣವೇ ಹೀಗಾಗುತ್ತಿದೆ ಎಂಬುದು ನನಗೆ ವೇದ್ಯವಾಗಿತ್ತು. ನಾನು ಮಾನಸಿಕವಾಗಿ ಸಿದ್ಧವಾಗುತ್ತಿದ್ದೆ. ಕೋವಿಡ್​ 19 ಟೆಸ್ಟ್ ರಿಪೋರ್ಟ್ 24ರಿಂದ 36 ಗಂಟೆ ಅವಧಿಯೊಳಗೆ ಸಿಗುತ್ತದೆ ಎಂದು ಹೇಳಿದ್ದರು. ಆದರೆ, 12 ಗಂಟೆಯೊಳಗೇ ರಿಪೋರ್ಟ್ ಸಿಕ್ಕಿತು.

    ಕರೊನಾ ಪಾಸಿಟಿವ್ ಇದೆ ನನಗೆ ಎಂಬುದು ಗೊತ್ತಾಯಿತು. ಈ ಸಂದರ್ಭದಲ್ಲಿ ನನಗೇನೂ ಅಚ್ಚರಿ ಅಥವಾ ದಿಗಲು ಆಗಲಿಲ್ಲ. ನನಗೆ ಈ ಸೋಂಕಿನ ಅರಿವು ಮೊದಲೇ ಇದ್ದ ಕಾರಣ ಏನೇನಾಗುತ್ತದೆ ಎಂಬುದರ ಅರಿವು ಇತ್ತು. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆ. ಮಾರನೇ ದಿನ ನನಗೆ ಡಾಕ್ಟರ್​ ಫೋನ್ ಬಂತು. ಅವರು ನನ್ನ ಬಳಿ ಕ್ವಾರಂಟೈನ್​ ಸೌಕರ್ಯಗಳ ಬಗ್ಗೆ ವಿಚಾರಿಸಿದರು. ಪ್ರತ್ಯೇಕ ವಾಷ್​ ರೂಮ್​ ಇದೆಯಾ ಎಂಬಿತ್ಯಾದಿ ವಿವರ ಕೇಳಿದರು. ಅಲ್ಲದೆ, ಸೋಂಕು ಹೇಗೆ ಬಂತು ಎಂಬುದನ್ನು ತಿಳಿಯಲು ಯಾರ್ಯಾರ ಸಂಪರ್ಕ ಆಗಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ರು. ಏನಾದ್ರೂ ನೆರೆವು ಬೇಕಾದ್ರೆ ಸಹಾಯವಾಣಿ ಕರೆ ಮಾಡುವಂತೆ ಸೂಚಿಸಿದರು.

    ಗುಣಲಕ್ಷಣಗಳು ತುಂಬಾ ಮೈಲ್ಡ್ ಆಗಿದ್ದ ಕಾರಣ ಹೋಮ್ ಐಸೋಲೇಷನ್​ಗೆ ಹೋಗುವಂತೆ ನನ್ನ ಡಾಕ್ಟರ್ ಕೂಡ ಸಲಹೆ ನೀಡಿದ್ರು. ಈ ಸಂದರ್ಭದಲ್ಲಿ ನನಗೆ ವಾಸನೆ, ರುಚಿ ಗೊತ್ತಾಗ್ತಾ ಇರಲಿಲ್ಲ. ಸ್ವಲ್ಪ ಉಸಿರಾಟದ ತೊಂದರೆ ಇತ್ತು. ಇದು ಬಿಟ್ಟರೆ ಹೆಚ್ಚೇನೂ ಗುಣಲಕ್ಷಣಗಳು ಇರಲಿಲ್ಲ. ಹಸಿವು ನಿಧಾನವಾಗಿ ಆಗತೊಡಗಿತ್ತು. ಸೋಂಕು ಮುಕ್ತಳಾಗುವ ಲಕ್ಷಣಗಳು ಗೋಚರಿಸಿದ್ದವು. ಈ ಹಂತದಲ್ಲಿ ಮೆಡಿಕೇಶನ್ ನಿಲ್ಲಿಸಿದ್ರು. ಕೆಲವು ಪೌಷ್ಟಿಕಾಂಶಯುತ ಆಹಾರ ಸೇವಿಸುವಂತೆ ಹೇಳಿದ್ರು.

    ಈಗಾಗಲೇ ನಾನು ವಿಟಮಿನ್ ಯುಕ್ತ ಆಹಾರ ಸೇವಿಸುತ್ತಿದ್ದೆ. ಅದಕ್ಕೆ ಪೂರಕವಾಗಿ ಡಾಕ್ಟರ್ ಕೂಡ ವಿಟಮಿನ್ ಸಿ, ಎ, ಬಿ, ಡಿ, ಇ, ಝಿಂಕ್ ಮತ್ತು ಕೆಲವು ಮಲ್ಟಿ ವಿಟಮಿನ್​ಗಳನ್ನು ಸೇವಿಸುವಂತೆ ಹೇಳಿದ್ರು. ನಾನು ಅವರು ಹೇಳಿದ್ದನ್ನು ಅನುಸರಿಸುವುದಕ್ಕೆ ತೊಡಗಿದೆ. ನಮ್ಮ ರೋಗನಿರೋಧಕ ಶಕ್ತಿ ಯಾವುದೇ ಪೌಡರ್ ಅಥವಾ ಮಾತ್ರೆಗಳಿಂದ ಬರುವಂಥದ್ದಲ್ಲ ಎಂಬುದು ನನಗೆ ಗೊತ್ತಿತ್ತು.

    ಇದನ್ನೂ ಓದಿ: ಕರೊನಾ ನಿಯಂತ್ರಣ: ಕೇಂದ್ರದ ಶ್ಲಾಘನೆಗೆ ಬಿಎಸ್‌ವೈ ಸಂತಸ

    ರೋಗ ಪ್ರತಿರೋಧ ಶಕ್ತಿ ಮೂರು ಅಂಶಗಳನ್ನು ಆಧರಿಸಿರುತ್ತದೆ. ಮೊದಲನೇಯದು ನಮ್ಮ ಒಟ್ಟಾರೆ ಜೀವನ ಶೈಲಿ. ಎರಡನೇಯದು ನಮ್ಮ ನಿದ್ರೆ. ನಾವು ಎಷ್ಟು ಹೊತ್ತು ಹೇಗೆ ನಿದ್ದೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಮೂರನೇಯದು ಸ್ಟ್ರೆಸ್ ಲೆವೆಲ್ ಹೇಗಿದೆ ಎಂಬುದು. ನಾನು ಫುಡ್ ಆ್ಯಂಡ್ ನುಟ್ರಿಷಿಯನ್ ಫೀಲ್ಡ್​ನಲ್ಲಿ ಕೆಲಸ ಮಾಡುತ್ತಿರುವ ಕಾರಣ ನನಗೆ ನನ್ನ ಜೀವನಶೈಲಿ ಬಗ್ಗೆ ಚೆನ್ನಾಗಿ ಗೊತ್ತಿತ್ತು. ನಾನು ತುಂಬಾ ಆ್ಯಕ್ಟಿವ್ ಇದ್ದೆ. ಈಗಲೂ ಹಾಗೆಯೇ ಇರಲು ಪ್ರಯತ್ನಿಸಿದೆ. ನಾನು ಪ್ರತಿ ರಾತ್ರಿ 6 ರಿಂದ 8 ಗಂಟೆ ನಿದ್ರೆ ಮಾಡುವುದನ್ನು ಖಾತರಿ ಮಾಡಿಕೊಳ್ಳುತ್ತೇನೆ. ತುಂಬಾ ಶಾಂತವಾಗಿರುವುದಕ್ಕೆ ಪ್ರಯತ್ನಿಸುತ್ತೇನೆ. ಊಟ ತಿಂಡಿ ವಿಚಾರದಲ್ಲೂ ಕೇರ್ ತೆಗೆದುಕೊಳ್ಳಬೇಕು. ವಿಟಮಿನ್ ಎ ಮತ್ತು ಸಿ ಹೆಚ್ಚಿರುವ ಆಹಾರ ಸೇವಿಸುತ್ತಿದ್ದೆ. ಪಪ್ಪಾಯ, ಮಾವಿನ ಹಣ್ಣು, ಆರೆಂಜ್, ಮೂಸಂಬಿ ಇತ್ಯಾದಿ ಆಯಾ ಕಾಲಮಾನದ ತಾಜಾ ಹಣ್ಣುಗಳನ್ನು ತಿನ್ನುತ್ತಿದ್ದೆ. ಸರಳವಾದ ಮನೆಯ ಊಟವನ್ನೇ ಉಣ್ಣುತ್ತಿದ್ದೆ. ನಿತ್ಯವೂ ಒಂದೇ ರೀತಿಯ ಊಟ ಮಾಡುವ ಬದಲು ವೈವಿಧ್ಯವನ್ನು ಊಟದಲ್ಲಿ ಮಾಡಿಕೊಳ್ಳುತ್ತಿದ್ದೆ. ಶಾರೀರಿಕ ಆರೋಗ್ಯ ಕಾಪಾಡುವುದಕ್ಕೆ ಇದು ಅಗತ್ಯ. ಇಲ್ಲದಿದ್ದರೆ ಮೆಡಿಕೇಶನನ್ನು ಶರೀರ ತಡೆದುಕೊಳ್ಳದು. ಜೀರ್ಣಿಸುವ ಶಕ್ತಿ ಕಡಿಮೆ ಇದ್ದ ಕಾರಣ ಹಸಿ ತರಕಾರಿ ತಿನ್ನುತ್ತಿರಲಿಲ್ಲ. ಕಾಫಿ, ಟೀ ಕುಡಿಯುತ್ತಿರಲಿಲ್ಲ. ಪ್ಯಾಕ್ಡ್ ಜ್ಯೂಸ್ ಬಿಟ್ಟುಬಿಟ್ಟಿದ್ದೆ.

    ಸಾಮಾನ್ಯವಾಗಿ ಹೇಳಬೇಕು ಅಂದರೆ ಈ ಅವಧಿಯಲ್ಲಿ ಮದ್ಯಪಾನ, ಧೂಮಪಾನ ಮಾಡಲೇಬಾರದು. ನಾನು ಇದ್ಯಾವುದೂ ಮಾಡಿಲ್ಲ. ಮಾಡುತ್ತಲೂ ಇಲ್ಲ. ಎಲ್ಲರಿಗೂ ಅನ್ವಯವಾಗುವಂತೆ ಜಾಗೃತಿ ಮೂಡಿಸುವ ಸಲುವಾಗಿ ಹೇಳಿದೆ ಅಷ್ಟೆ. ನನ್ನ ಹೋಮ್ ಐಸೋಲೇಷನ್ ಅವಧಿ ಮುಗಿದ ಬಳಿಕ ಅಧಿಕೃತರಿಗೆ ವಿಷಯ ತಿಳಿಸಿದೆ. ಅವರು ನನಗೆ ಗ್ರೀನ್ ಸಿಗ್ನಲ್ ಕೊಟ್ಟರು. ಆದರೂ ನಾನು ಸೋಂಕು ಹರಡದಂತೆ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿದ್ದೇನೆ.

    ನಿಮಗೂ ಏನಾದ್ರೂ ಇಂತಹ ಅನುಭವ ಆದ್ರೆ ಕೂಡಲೇ ಕರೊನಾ ಸಹಾಯವಾಣಿಯನ್ನು ಸಂಪರ್ಕಿಸಿ. ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಸುತ್ತಮುತ್ತ ಹೈ ರಿಸ್ಕ್ ಜನರಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಿ. ನಿಮಗೆ ನೀವೇ ಐಸೋಲೇಷನ್ ವಿಧಿಸಿಕೊಳ್ಳಿ. ಸೋಂಕು ತಗುಲಿದ ಬಳಿಕ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಪ್ರಯತ್ನಿಸುವ ಬದಲು ಉತ್ತಮ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ. ಯಾವುದೋ ಪೌಡರ್ ತಿನ್ನುವುದರಿಂದ, ಟಾನಿಕ್ ಕುಡಿಯುವುದರಿಂದ ರಾತ್ರಿ ಬೆಳಗಾಗುವುದರೊಳಗೆ ರೋಗ ಪ್ರತಿರೋಧ ಶಕ್ತಿ ಹೆಚ್ಚುವುದಿಲ್ಲ ಎಂಬುದು ನಿಮಗೆ ನೆನಪಿರಲಿ. ಸಾಮಾಜಿಕ ಮತ್ತು ವೈಯಕ್ತಿಕ ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಧರಿಸಿಕೊಂಡೇ ಹೊರಗೆ ಓಡಾಡಿ. ಕರೊನಾ ತಡೆಯಲು ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸಿ. (ಕೃಪೆ- ಫಿಟ್ ತಕ್​)

    ಕರೊನಾ ಸೇನಾನಿಗಳ ಸ್ಥಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts