

ಅಮರಾವತಿ: ಕಳೆದ ಕೆಲ ದಿನಗಳಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ 35ಕ್ಕೂ ಹೆಚ್ಚು ಮಂದಿ ಪ್ರಾಣ ಕೆಳದುಕೊಂಡಿದ್ದಾರೆ. ನೆರೆಗೆ ಸಂಬಂಧಿಸಿದಂತೆ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದು, ಸಾಗರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಾವಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವಾಗ ರೈಲಿಗೆ ಸಿಲುಕುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧುರಾನಗರದ ರೈಲ್ವೆ ಸೇತುವೆ ಮೇಲೆ ಈ ಘಟನೆ ನಡೆದಿದ್ದು, ಪ್ರವಾಹದ ಕುರಿತು ಸಿಎಂ ರೈಲ್ವೆ ಸೇತುವೆ ಮೇಲೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದರು. ರೈಲು ಸಂಚಾರಕ್ಕೆಂದು ವಿನ್ಯಾಸಗೊಳಿಸಲಾದ ಸೇತುವೆಯಲ್ಲಿ ಪಾದಚಾರಿಗಳಿಗೆ ಕಿರಿದಾದ ಸ್ಥಳ ಬಿಟ್ಟು ದೊಡ್ಡ ಸ್ಥಳಾವಕಾಶವಿಲ್ಲ. ಆಗ ನಾಯ್ಡು ಹಳಿ ಮಧ್ಯದಲ್ಲೇ ನಡೆದು ಹೋಗುತ್ತಿದ್ದಾಗ, ಸಡನ್ ಆಗಿ ರೈಲು ಬಂದಿದೆ. ತ್ವರಿತವಾಗಿ ಯೋಚಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ನಾಯ್ಡು ಅವರನ್ನು ಟ್ರ್ಯಾಕ್‌ನ ಬದಿಗೆ ಎಳೆದು ಕಿರಿದಾದ ಪಾದಚಾರಿ ಮಾರ್ಗಕ್ಕೆ ತಂದಿದ್ದಾರೆ. ಕೆಲವೇ ಇಂಚಿನಲ್ಲಿ ನಾಯ್ಡು ಪಾರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಐದು ದಿನಗಳಿಂದ ಚಂದ್ರಬಾಬು ನಾಯ್ಡು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಹಲವು ಭಾರೀ ಅವರ ಭದ್ರತಾ ಸಿಬ್ಬಂದಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿ ವಿರುದ್ಧ ಜನ ಕಿಡಿಕಾರಿದ್ದಾರೆ.