ಶಿಕ್ಷೆಯಾದರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಡಲು ದರ್ಶನ್​ಗೆ ಇರುವುದು ಇದೊಂದೇ ದಾರಿ

Darshan
Published on

ಬೆಂಗಳೂರು: ಗೆಳತಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸ್ಸೇಜ್​ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್​​ಗೆ ದಿನ ಕಳೆದಂತೆ ಹೊಸ ಹೊಸ ಸಂಕಷ್ಟಗಳು ಎದುರಾಗುತ್ತಿದೆ. ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ಅನ್ನು ಸಲ್ಲಸಿದ್ದು, ಪುಟ ತಿರುಗಿಸಿದಂತೆ ಡಿ ಗ್ಯಾಂಗ್​ನ ಒಂದೊಂದೇ ಕರಾಳ ಕೃತ್ಯ ಬೆಳಕಿಗೆ ಬರುತ್ತಿದೆ.

ಸದ್ಯ ಚಾರ್ಜ್​​​ಶೀಟ್​ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ನೋಡಿದರೆ ಡಿ ಗ್ಯಾಂಗ್​ಗೆ ಜೈಲೂಟ ಖಾಯಂ ಎಂದು ಹೇಳಲಾಗಿದ್ದು, ಈ ವಿಚಾರ ತಿಳಿದು ನಿರ್ಮಾಪಕರು ಕಂಗಾಲಾಗಿದ್ದಾರೆ. ಏಕೆಂದರೆ ನಟ ದರ್ಶನ್​ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಮುಂಗಡವನ್ನು ಪಡೆದಿದ್ದಾರೆ. ಈಗಾಗಲೇ ಡೆವಿಲ್​ ಚಿತ್ರವನ್ನು ಅರ್ಧ ಮುಗಿಸಿಕೊಟ್ಟಿರುವ ನಟ ದರ್ಶನ್​ ಬಾಕಿ ಚಿತ್ರೀಕರಣ ಉಳಿಸಿಕೊಂಡಿರುವ ಸಮಯದಲ್ಲೇ ಜೈಲು ಪಾಲಾಗಿದ್ದಾರೆ. ಒಂದು ವೇಳೆ ಅವರಿಗೆ ಸಜೆಯಾದರೆ ಮುಂದಿನ ನಡೆಯೇನು ಎಂಬುದರ ಕುರಿತು ಚಿತ್ರತಂಡ ಯೋಚಿಸುತ್ತಿದ್ದು, ದರ್ಶನ್​ಗೆ ಶಿಕ್ಷೆಯಾದರೂ ಚಿತ್ರ ಮುಗಿಸಿಕೊಡಲು ದಾರಿ ಸಿಕ್ಕಿದೆ.

darshan

ಈ ಹಿಂದೆ TADA ಕೇಸ್​ನಲ್ಲಿ ನಟ ಸಂಜಯ್​ ದತ್​ಗೆ ಶಿಕ್ಷೆಯಾದ ಸಂದರ್ಭದಲ್ಲಿ ಅವರಿಗೂ ಇದೇ ಸಂಕಷ್ಟ ಎದುರಾಗಿತ್ತು. ಆಗ ಸಂಜಯ್​ ದತ್​ ಕೂಡ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಕಾಲ್​ಶೀಟ್​ ಪ್ರಕಾರ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಡಲು ಕೋರ್ಟ್​ ಸಂಜಯ್​ ದತ್​ಗೆ 164 ದಿನಗಳ ಕಾಲ ಪೆರೋಲ್​ ನೀಡಿತ್ತು. ಪೆರೋಲ್​ ಮೇಲೆ ಬಿಡುಗಡೆಯಾಗಿದ್ದ ನಟ ಸಂಜಯ್​ ದತ್​ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣವನ್ನು ಮುಗಿಸಿ ನಿರ್ಮಾಪಕರನ್ನು ಸಂಕಷ್ಟದಿಂದ ಪಾರು ಮಾಡಿದ್ದರು.

ಇದೀಗ ದರ್ಶನ್​ಗೂ ಇದೇ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಟ ದರ್ಶನ್​ ಡೆವಿಲ್​ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಿದ್ದು, ಇದಾದ ಬಳಿಕ ತರುಣ್​ ಸುಧೀರ್​ ಹಾಗೂ ಜೋಗಿ ಪ್ರೇಮ್​ ಅವರ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ರೇಣುಕಸ್ವಾಮಿ ಹತ್ಯೆ ಕೇಸ್​ನಲ್ಲಿ ಮಟ ದರ್ಶನ್​ಗೆ ಸಜೆಯಾದರೆ ನಿರ್ಮಾಪಕರು ನ್ಯಾಯಾಲಯಕ್ಕೆ ಪೆರೋಲ್​ಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೆರೋಲ್​ ಪಡೆದು ದರ್ಶನ್ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಬಹುದಾಗಿದೆ. ಇದಕ್ಕೆಲ್ಲಾ ನ್ಯಾಯಾಲಯ ಅನುವು ಮಾಡಿಕೊಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net