ನಮ್ಮನ್ನು ಸೋಲಿಸಲು ಭಾರತೀಯರು... ಬಾರ್ಡರ್​-ಗವಾಸ್ಕರ್​ ಟ್ರೋಫಿಗೂ ಮುನ್ನ ಆಸೀಸ್​ ಬ್ಯಾಟರ್​ ಹೇಳಿಕೆ ವೈರಲ್​

Usman Khawaja
Published on

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​ ಗವಾಸ್ಕರ್​ ಟ್ರೋಫಿ ಶುರುವಾಗುವುದಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಉಭಯ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ನಾವು ನೋಡಿರುವಂತೆ ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭಕ್ಕೂ ಮುನ್ನ ಆ ದೇಶದ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ಕೊಡುವ ಮೂಲಕ ಎದುರಾಳಿಗಳನ್ನು ಕೆಣಕುವ ಮೂಲಕ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ ಉಸ್ಮಾನ್​ ಖವಾಜಾ ಈ ಬಗ್ಗೆ ಮಾತನಾಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಖವಾಜಾ, ನಾವು ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಭಾರತವನ್ನು ಸೋಲಿಸಲು ಬಯಸುತ್ತೇವೆ. ಏಕೆಂದರೆ ಅವರು ನಮ್ಮನ್ನು ಸೋಲಿಸಲು ಎಷ್ಟು ಇಷ್ಟಪಡುತ್ತಾರೋ ಅದೇ ರೀತಿ ನಾವು ಕೂಡ ಈ ಬಾರಿ ಸರಣಿಯನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ.

ನಾವು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದೇವೆ. ನಮ್ಮ ನಡುವೆ ಪೈಪೋಟಿ ದೊಡ್ಡದಾಗಿದೆ ಮತ್ತು ನಾವು ಅದನ್ನು ಗೌರವದ ಸಂಕೇತವಾಗಿ ತೆಗೆದುಕೊಳ್ಳುತ್ತೇವೆ. ಭಾರತೀಯರು ಯಾವುದೇ ರೀತಿಯ ಕ್ರಿಕೆಟ್​ ಆಗಲಿ ಆಸ್ಟ್ರೇಲಿಯಾವನ್ನು ಸೋಲಿಸಲು ಇಷ್ಟಪಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್​ ಬೆಳೆದ ರೀತಿ ನೋಡಿದರೆ ಭಾರತೀಯರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಆಸ್ಟ್ರೇಲಿಯಾದ ನೆಲದಲ್ಲಿ ಎರಡು ಬಾರಿ ಸರಣಿಯನ್ನು ಗೆದ್ದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು ಎಂದು ಉಸ್ಮಾನ್​ ಖವಾಜಾ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲು ಭಾರತ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​ ಸರಣಿಯನ್ನು ಆಡಲಿದ್ದು, ಈಗಾಗಲೇ ಕೆಲವು ಆಟಗಾರರು ದುಲೀಪ್​ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಮಾರ್ಚ್​ ತಿಂಗಳಿನಿಂದ ಈಚೆಗೆ ಆಸ್ಟ್ರೇಲಿಯಾ ತಂಡವು ಯಾವುದೇ ಟೆಸ್ಟ್​ ಸರಣಿಯನ್ನು ಆಡಿಲ್ಲ. ಹೀಗಾಗಿ ಭಾರತ ವಿರುದ್ಧದ ಸರಣಿಗೆ ಈಗಿನಿಂದಲೇ ತಯಾರಿ ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net