ಕಪಿಲ್​, ಜಹೀರ್​ ಅಲ್ಲವೇ ಅಲ್ಲಾ... ಶಮಿಗೆ ಈ ಇಬ್ಬರು ಮಾತ್ರ ನೆಚ್ಚಿನ ಬೌಲರ್​ಗಳಂತೆ

Mohammed Shami 1
Published on

ನವದೆಹಲಿ: ಟೀಮ್​ ಇಂಡಿಯಾ ಪರ ಅತ್ಯದ್ಭುತ ಪ್ರದರ್ಶನ ನೀಡಿದ ಆಟಗಾರರು ಅನೇಕ ಮಂದಿ ಇದ್ದು, ದಂತಕಥೆಯಾಗಿ ಉಳಿದವರು ಕೆಲವರು ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರೆಂದರೆ ಅದು 1983ರ ವಿಶ್ವಕಪ್​ ವಿಜೇತ ತಂಡದ ನಾಯಕ ಕಪಿಲ್​ ದೇವ್​ ಹಾಗೂ 2011 ಒಡಿಐ ವರ್ಲ್ಡ್​ಕಪ್​ ವಿನ್ನಿಂಗ್​ ಟೀಮ್​ನ ಸದಸ್ಯ ಜಹೀರ್​ ಖಾನ್​​ ಎಂದು ಹೇಳಬಹುದಾಗಿದೆ. ಆಲ್ರೌಂಡರ್​ ಆಗಿದ್ದ ಕಪಿಲ್​ ದೇವ್​ ತಂಡ ಸಂಕಷ್ಟದಲ್ಲಿರುವ ಸಮಯದಲ್ಲಿ ಆಸರೆಯಾಗುವ ಮೂಲಕ ಅವರು ಭಾರತೀಯ ಕ್ರಿಕೆಟ್​ನ ಇತಿಹಾಸದ ಪುಟ ಸೇರಿದ್ದಾರೆ. ಜಹೀರ್​ ಕೂಡ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇವರಿಬ್ಬರು ಭಾರತ ಕ್ರಿಕೆಟ್​ ತಂಡದ ದಂತಕಥೆಗಳಾಗಿದ್ದಾರೆ.

ಈಗಿನ ಯುಗದಲ್ಲಿ ವೇಗಿಗಳಾದ ಭುವನೇಶ್ವರ್​ ಕುಮಾರ್​, ಉಮೇಶ್​ ಯಾದವ್, ಮೊಹಮ್ಮದ್​ ಶಮಿ, ಜಸ್ಪ್ರೀತ್​ ಬುಮ್ರಾ ತಮ್ಮದೇ ಆದ ಬೆಂಚ್​ಮಾರ್ಕ್​ಅನ್ನು ಸೆಟ್​ ಮಾಡಿದ್ದು, ಮಾಜಿ ಸ್ಪಿನ್ನರ್‌ಗಳಾದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಮತ್ತು ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತ ಕ್ರಿಕೆಟ್​ ಕಂಡ ಅತ್ಯುತ್ತಮ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿದ್ದಾರೆ. ಇವರೆಲ್ಲರ ಹೊರತಾಗಿಯೂ ಮೊಹಮ್ಮದ್​ ಶಮಿಗೆ ಈ ಇಬ್ಬರು ವೇಗಿಗಳೆಂದರೆ ಅಚ್ಚುಮೆಚ್ಚಂತೆ. ಈ ಬಗ್ಗೆ ಮಾತನಾಡಿರುವ ಶಮಿ ತಮ್ಮ ಅತ್ಯುತ್ತಮ ಬೌಲರ್​ಗಳನ್ನು ಹೆಸರಿಸಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​​ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶಮಿ, ನನ್ನ ಲಿಸ್ಟ್​ನಲ್ಲಿ ಬಹಳಷ್ಟು ಮಂದಿ ಅಚ್ಚುಮೆಚ್ಚಿನ ಬೌಲರ್​ಗಳಿದ್ದಾರೆ. ಅದರಲ್ಲಿ ಪ್ರಮುಖವಾಗಿ ವಕಾರ್​ ಯೂನಿಸ್​ ಹಾಗೂ ಡೇಲ್​ ಸ್ಟೇನ್​ ನನ್ನ ಆಲ್​ ಟೈಮ್​ ಫೇವರಿಟ್​ ಎಂದು ಹೇಳುತ್ತೇನೆ. ಇದಲ್ಲದೆ ಹಲವು ವಿಚಾರಗಳ ಕುರಿತು ಶಮಿ ಮಾತನಾಡಿದ್ದು, ತಮಗೆ ಅಡ್ಡ ಹೆಸರು ಬಂದ ಕುರಿತು ಹಾಗೂ ಪ್ರಸ್ತುತ ವಿಚಾರಗಳ ಕುರಿತು ಮಾತನಾಡಿದ್ದಾರೆ.

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡಿದ ಶಮಿ ಮೊದಲ ಪಂದ್ಯದಲ್ಲೇ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಎಲ್ಲಾ ಮಾದರಿಯಲ್ಲೂ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಶಮಿ ಟೀಮ್​ ಇಂಡಿಯಾ ಪಾಲಿಗೆ ಟ್ರಬಲ್​ ಶೂಟರ್​ ಆಗಿದ್ದಾರೆ ಎಂದರೆ ತಪ್ಪಾಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net