

ಬೆಂಗಳೂರು: ಮದುವೆ ಎಂದಾಕ್ಷಣ ವಧುವರರು ಪಾರಂಪರಿಕ ಪೋಷಾಕುಗಳನ್ನು ತೊಟ್ಟ ಚಿತ್ರಣ ಕಣ್ಮುಂದೆ ಬರುತ್ತದೆ. ಉತ್ತರ ಭಾರತದ ಕಡೆ ವಧುವು ಭಾರೀ ಒಡವೆಗಳನ್ನು ತೊಟ್ಟು, ಕೆಂಪು ಬಣ್ಣದ ಎಂಬ್ರಾಯ್ಡರಿ ಲೆಹೆಂಗಾ ಚೋಲಿಯಲ್ಲಿ ಝಗಮಗಿಸಬೇಕು. ಆದರೆ, ಇಲ್ಲೊಬ್ಬಳು ವಧು, ಲೆಹೆಂಗಾ ಬದಲಿಗೆ ಕಟ್ಗಳನ್ನು ಹೊಂದಿದ ಜೀನ್ಸ್ ಪ್ಯಾಂಟು ತೊಟ್ಟು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾಳೆ.
ವಿಟ್ಟಿ ವೆಡ್ಡಿಂಗ್ ಎಂಬ ಸಂಸ್ಥೆಯ ಇನ್ಸ್ಟಾಗ್ರಾಂ ಖಾತೆಯಲ್ಲಿ ಮುದ್ರಾ ಎಂಬ ವಧುವಿನ ಮದುವೆ ಸಂದರ್ಭದ ದೃಶ್ಯವೊಂದನ್ನು ಪೋಸ್ಟ್ ಮಾಡಿದ್ದಾರೆ. ಸಾತ್ ಫೇರೆಗೆ ಕರೆದುಕೊಂಡು ಹೋಗಲು ಕಾದಿರುವ ತನ್ನ ಮಿತ್ರರೊಂದಿಗೆ ಒಡನಾಡುತ್ತಾ, ಭಾರೀ ಡಿಸೈನಿನ ಚೋಲಿ, ದುಪಟ್ಟಾ, ಒಡವೆಗಳು ಎಲ್ಲವನ್ನೂ ಧರಿಸಿರುವ ಮುದ್ರಾ, ಲೆಹೆಂಗಾ ಬದಲಿಗೆ ಮಾತ್ರ ಜೀನ್ಸ್ ಪ್ಯಾಂಟ್, ಅದರಲ್ಲೂ ಹರಿದ ಡಿಸೈನಿನ ಜೀನ್ಸ್ ಪ್ಯಾಂಟನ್ನು ತೊಟ್ಟಿದ್ದಾಳೆ. ತಮಾಷೆಯಾಗಿ, “ನನಗೆ ಲೆಹೆಂಗಾ ಹಾಕಿಕೊಳ್ಳಲು ಇಷ್ಟವಿಲ್ಲ. ಹೀಗೆ ಹೋಗುತ್ತೇನೆ" ಎಂದಿದ್ದಾಳೆ.
ವಧುವಿನ ಮಿತ್ರರಲ್ಲೊಬ್ಬ ನಡೀ ಹಾಗಾದ್ರೆ ಅಂತ ಕೆಳಅಂತಸ್ತಿನಲ್ಲಿರುವ ಮಂಟಪಕ್ಕೆ ಕರೆದೊಯ್ಯಲು ಮುಂದಾಗುವಂತೆ ನಟಿಸಿದರೆ, ಎಲ್ಲರೂ ನಗುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. ಈ ಫ್ಯೂಶನ್ ಸ್ಟೈಲ್ಫ್ಯಾಷನ್ ತೋರಿಸುತ್ತಿರುವ ವಧುವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವಿಡಿಯೋ ತುಣುಕು ಮೂರೇ ದಿನಗಳಲ್ಲಿ ಸುಮಾರು 50 ಸಾವಿರ ವೀಕ್ಷಣೆಗಳನ್ನು ಪಡೆದಿದೆ. (ಏಜೆನ್ಸೀಸ್)